ಕೊರೊನಾ ವೈರಸ್ ನ ನಿಗೂಢ ರಹಸ್ಯವನ್ನು ಭೇದಿಸಲು ಮುಂದಾದ ಅಮೆರಿಕ

Spread the love

ವಾಷಿಂಗ್ಟನ್: ಕೊರೊನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವುಹಾನ್ ನಲ್ಲಿ ಎಲ್ಲಿ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಿಗೂಢ ರಹಸ್ಯವನ್ನು ಭೇದಿಸಲು ಅಮೆರಿಕ ಈಗ ಮುಂದಾಗಿದೆ. ಅಮೆರಿಕ ಸರ್ಕಾರ ಈ ವೈರಸ್ ಮೊದಲು ವುಹಾನ್ ನಲ್ಲಿರುವ ವೆಟ್ ಮಾರುಕಟ್ಟೆಯಿಂದ ಮನುಷ್ಯರಿಗೆ ಬಂದಿದೆಯೋ ಅಥವಾ ವುಹಾನ್ ವೈರಾಲಜಿ ಲ್ಯಾಬ್ ನಿಂದ ಸೋರಿಕೆ ಆಗಿದೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದರು.

ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೊ ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ, ಚೀನಾದ ವುಹಾನ್ ನಲ್ಲಿ ವೈರಸ್ ಸೃಷ್ಟಿಯಾಗಿದೆ ಎನ್ನುವುದು ತಿಳಿದಿದೆ. ಈ ವೈರಸ್ ಹೇಗೆ ಹರಡಿತು ಎನ್ನುವ ಬಗ್ಗೆ ಸ್ಪಷ್ಟಪಡಿಸಬೇಕು. ವೈರಾಲಜಿ ಪ್ರಯೋಗಾಲಯದ ಕೆಲವೇ ಮೈಲು ದೂರದಲ್ಲಿ ವೆಟ್ ಮಾರುಕಟ್ಟೆಯಿದೆ. ಈ ವಿಚಾರದ ಬಗ್ಗೆ ಚೀನಾ ಸರ್ಕಾರ ಶುದ್ಧ ಹಸ್ತವಾಗಿರಬೇಕು ಎಂದು ಆಗ್ರಹಿಸಿದ್ದಾರೆ.

ಬುಧವಾರ ಫಾಕ್ಸ್ ನ್ಯೂಸ್ ಚೀನಾದ ವೈರಾಲಜಿ ಪ್ರಯೋಗಾಲಯದಿಂದ ಹರಡಿದೆ. ಇದು ಜೈವಿಕ ಅಸ್ತ್ರವಲ್ಲ. ವೈರಸ್ ವಿರುದ್ಧ ಹೋರಾಡಲು ಅಮೆರಿಕಕ್ಕೆ ಸರಿಸಮಾನವಾಗಲು ಅಥವಾ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ತೋರಿಸಲು ಈ ವೈರಸ್ ಅಭಿವೃದ್ಧಿ ಪಡಿಸಿರಬಹುದು ಎಂದು ವರದಿ ಮಾಡಿತ್ತು. ಈ ವಾರದ ಆರಂಭದಲ್ಲಿ ಡೈಲಿ ಮೇಲ್, ವುಹಾನ್ ವೈರಾಲಜಿ ಲ್ಯಾಬ್ ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಎಂದು ವರದಿ ಮಾಡಿತ್ತು.

ಬಾವಲಿಗಳ ಜೀನ್ ತೆಗೆದು ಸಂಶೋಧನೆ ನಡೆಸಲಾಗುತ್ತಿತ್ತು. ಈ ಸಂಶೋಧನೆಗೆ ಅಮೆರಿಕ ಹಣ ನೀಡುತ್ತಿತ್ತು. ವುಹಾನ್ ಲ್ಯಾಬ್ ವಿಜ್ಞಾನಿಗಳು 1 ಸಾವಿರ ಕಿ. ಮೀ ದೂರದಲ್ಲಿರುವ ಯುನಾನ್ ಗುಹೆಯಿಂದ ಬಾವಲಿಗಳನ್ನು ಹಿಡಿದು ಅಧ್ಯಯನಕ್ಕಾಗಿ ಸ್ವಾಬ್ ಸಂಗ್ರಹಿಸಿ ಹೊಸ ರೀತಿಯ ವೈರಸ್ ಸಂಶೋಧನೆ ನಡೆಸುತ್ತಿದ್ದರು. ಈ ವೇಳೆ ಪತ್ತೆಯಾದ ವೈರಸ್ಸನ್ನು ಹಂದಿಗಳಿಗೆ ಚುಚ್ಚಿ ಯಾವ ರೀತಿ ಸೋಂಕು ತಗಲುತ್ತದೆ ಎಂದು ಪರೀಕ್ಷಿಸಿದ್ದಾರೆ.

ಈ ಅಧ್ಯಯನದ ಬಳಿಕ ಪ್ರಯೋಗಕ್ಕೆ ಬಳಸಲಾದ ಬಾವಲಿ ಮತ್ತು ಹಂದಿಗಳನ್ನು 10 ಕಿ.ಮೀ ದೂರದ ವೆಟ್ ಮಾರುಕಟ್ಟೆಗೆ ಮಾರಾಟ ಮಾಡಿದ್ದರಿಂದ ವೈರಸ್ ಹರಡಿದೆ. ಚೀನಾದ ಈ ಪ್ರಯೋಗಗಳಿಗೆ ಅಮೆರಿಕ ಸುಮಾರು 3.7 ದಶಲಕ್ಷ ಡಾಲರ್(28 ಕೋಟಿ ರೂ.) ಸಹಾಯ ಮಾಡಿದೆ ಎಂದು ವರದಿ ಉಲ್ಲೇಖಿಸಿತ್ತು.

2011 ರಿಂದ 2015ರ ಅಕ್ಟೋಬರ್ ವರೆಗೆ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮೂರು ದಿನಗಳ ಹಂದಿಗಳ ಮೇಲೆ ಚುಚ್ಚಿ ಪ್ರಯೋಗ ನಡೆಸಲಾಗಿದೆ. ಪ್ರಯೋಗದ ಫಲಿತಾಂಶವನ್ನು 2017 ರಲ್ಲಿ “ಸಾರ್ಸ್ ಸಂಬಂಧಿಸಿದ ಕೊರೊನಾ ವೈರಸ್ಸಿನ ಮೂಲ ಪತ್ತೆ” ಪ್ರಬಂಧದಲ್ಲಿ ವಿವರಿಸಲಾಗಿದೆ.

ವಿಶೇಷ ಏನೆಂದರೆ ಕಳೆದ ವಾರ ವುಹಾನ್ ನಗರದಲ್ಲಿರುವ ಪ್ರಸಿದ್ಧ ವೈದ್ಯರೊಬ್ಬರು ವೆಟ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂಬ ವಾದವನ್ನು ತಿರಸ್ಕರಿಸಿದ್ದರು. ವುಹಾನ್ ನಲ್ಲಿ ಪತ್ತೆಯಾದ ಮೊದಲ 41 ಕೊರೊನಾ ಸೋಂಕಿತರ ಜೊತೆ ವೆಟ್ ಮಾರುಕಟ್ಟೆಗೆ ಸಂಬಂಧವಿಲ್ಲದ 10 ಮಂದಿಯೂ ಇದ್ದರು. ವೆಟ್ ಮಾರುಕಟ್ಟೆಯೇ ಮೂಲ ಎಂದ ಮೇಲೆ ಎಲ್ಲರೂ ಇಲ್ಲಿಯವರೇ ಆಗಬೇಕಿತ್ತು. ಉಳಿದ 10 ಮಂದಿ ಬೇರೆಯವರು ಆಗಿದ್ದ ಕಾರಣ ವೈರಸ್ ಮೂಲ ವೆಟ್ ಮಾರುಕಟ್ಟೆ ಅಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು.


Spread the love

About Laxminews 24x7

Check Also

ಬೆಲೆ ಏರಿಕೆ ನಡುವೆ BSNL ಗ್ರಾಹಕರಿಗೆ ಗುಡ್ ನ್ಯೂಸ್

Spread the love ನವದೆಹಲಿ: ಭಾರತದಲ್ಲಿನ ಟೆಲಿಕಾಂ ಸೇವಾ ಪೂರೈಕೆದಾರರು ಇತ್ತೀಚೆಗೆ ತಮ್ಮ ರೀಚಾರ್ಜ್ ಬೆಲೆಗಳನ್ನು ನವೀಕರಿಸಿದ್ದಾರೆ. ರಿಲಯನ್ಸ್ ಜಿಯೋ, ಏರ್‌ಟೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ