Breaking News
Home / ಜಿಲ್ಲೆ / ಸೋಮವಾರದಿಂದ ನಗರದ ಹೊರವಲಯದ ಹಿಂಡಾಲ್ಕೋ ಮೈದಾನ, ಆರ್.ಟಿ.ಓ ಮೈದಾನ, ಪೊದ್ದಾರ್ ಶಾಲಾ ಮೈದಾನ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ

ಸೋಮವಾರದಿಂದ ನಗರದ ಹೊರವಲಯದ ಹಿಂಡಾಲ್ಕೋ ಮೈದಾನ, ಆರ್.ಟಿ.ಓ ಮೈದಾನ, ಪೊದ್ದಾರ್ ಶಾಲಾ ಮೈದಾನ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ

Spread the love

ಕೊರೋನಾ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ದೃಷ್ಟಿಯಿಂದ ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಹೋಲಸೇಲ್ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿದ್ದು, ಸೋಮವಾರದಿಂದ ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಎಪಿಎಂಸಿ ಕಚೇರಿಯಲ್ಲಿ ಶುಕ್ರವಾರ (ಏ.೩) ನಡೆದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ಸೋಮವಾರದಿಂದ ನಗರದ ಹೊರವಲಯದ ಹಿಂಡಾಲ್ಕೋ ಮೈದಾನ, ಆರ್.ಟಿ.ಓ ಮೈದಾನ, ಪೊದ್ದಾರ್ ಶಾಲಾ ಮೈದಾನ ಹಾಗೂ ಬಿ.ಎಸ್.ಯಡಿಯೂರಪ್ಪ ಮಾರ್ಗದ ಗಾಳಿಪಟ ಉತ್ಸವ(ಮಾಲಿನಿ ಸಿಟಿ) ಮೈದಾನ ಹೀಗೆ ನಾಲ್ಕು ದಿಕ್ಕುಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ
ನಿಗದಿತ ಈ ಸ್ಥಳಗಳಲ್ಲಿ ತಕ್ಷಣವೇ ವ್ಯಾಪಾರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರದವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ವಹಿವಾಟು ನಡೆಸಬೇಕು. ತದನಂತರ ನಗರದ ಹೊರವಲಯದಲ್ಲಿ ಗುರುತಿಸಲಾಗುವ ನಿಗದಿತ ಮೂರ್ನಾಲ್ಕು ಸ್ಥಳಗಳಲ್ಲಿಯೇ ವಹಿವಾಟು ನಡೆಸಬೇಕು ಎಂದು ತಿಳಿಸಿದರು.
ಉಳ್ಳಾಗಡ್ಡಿ, ಆಲುಗಡ್ಡೆ ಮತ್ತು ಗೆಣಸು ಮಾತ್ರ ಮುಖ್ಯ ಪ್ರಾಂಗಣದಲ್ಲಿ ವಹಿವಾಟು ನಡೆಸಬೇಕು.
ಉಳಿದ ತರಕಾರಿ ಮಾರಾಟವನ್ನು ನಾಲ್ಕು ಕಡೆ ಗುರುತಿಸಲಾಗುವ ಸ್ಥಳಗಳಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ತಿಳಿಸಿದರು.

ಕಾನೂನು ಕ್ರಮದ ಎಚ್ಚರಿಕೆ:

ತರಕಾರಿ ಸೇರಿಂದತೆ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ವಿನಾಕಾರಣ ವ್ಯತ್ಯಯ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಇಡೀ ದೇಶವೇ ಸಂದಿಗ್ಧ ಸ್ಥಿತಿಯಲ್ಲಿ ಇರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ವ್ಯಾಪಾರಸ್ಥರು ಮತ್ತು ರೈತರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು.
ರೈತರು, ವ್ಯಾಪಾರಸ್ಥರು, ಹಮಾಲರ ಕುಟುಂಬಗಳು ಸೇರಿದಂತೆ ಎಲ್ಲ  ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ ಆಗಿದೆ. ಆದ್ದರಿಂದ ಸ್ವಲ್ಪ ಅನಾನುಕೂಲ ಆದರೂ ಸರಿ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಆಗುವಂತೆ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ.
ವ್ಯಾಪಾರಿಗಳು, ಹಮಾಲರು ಸೇರಿದಂತೆ ಎಲ್ಲರಿಗೂ ಅಗತ್ಯವಿರುವಷ್ಟು ಪಾಸ್ ಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕಿರುವುದರಿಂದ ಯಾರೂ ಕೂಡ ವ್ಯಾಪಾರ-ವಹಿವಾಟು ಬಂದ್ ಮಾಡದೇ ಸಾರ್ವಜನಿಕರ ದೃಷ್ಟಿಯಿಂದ ಇಂತಹ ತುರ್ತು ಸಂದರ್ಭದಲ್ಲಿ ಪರಸ್ಪರ ಸಹಕರಿಸಬೇಕು.
ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯಾಪಾರ-ವಹಿವಾಟು ಕೈಗೊಂಡರೂ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು ಎಂದರು.
ಮೆಣಸಿನಕಾಯಿ ಮಾರಾಟಕ್ಕೆ ಹೆಚ್ಚುವರಿ ಅವಕಾಶ ಕಲ್ಪಿಸಲು ಕೋರಿಕೆ:
ಪ್ರತಿದಿನ ಸಾವಿರಾರು ಕ್ವಿಂಟಲ್ ಮೆಣಸಿನಕಾಯಿ ಬರಲಿದೆ. ಕಿತ್ತೂರು, ಬೈಲಹೊಂಗಲ, ಖಾನಾಪುರ ಮತ್ತಿತರ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ವರ್ತಕರು ಮನವಿ ಮಾಡಿಕೊಂಡರು.
ಕಿತ್ತೂರು, ಖಾನಾಪುರ, ಹಿರೇಬಾಗೇವಾಡಿ ಮತ್ತಿತರ ಕಡೆಗಳಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಹೋಲ್ ಸೇಲ್ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಸಾರ್ವಜನಿಕರು ಕೂಡ ತರಕಾರಿ ಖರೀದಿಸಲು ಇಲ್ಲಿಗೆ ಬರುತ್ತಿರುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಆದ್ದರಿಂದ ಹೋಲಸೇಲ್ ವ್ಯಾಪಾರಸ್ಥರನ್ನು ಹೊರತುಪಡಿಸಿ ಉಳಿದವರನ್ನು ನಿರ್ಬಂಧಿಸಬೇಕು ಎಂದು ವರ್ತಕರು ಸಲಹೆ ನೀಡಿದರು.
ಪ್ರತಿದಿನ ಎಲ್ಲ ಬಗೆಯ ವಹಿವಾಟು ಮಾಡುವ ಬದಲು ಒಂದು ದಿನ ತರಕಾರಿ, ಒಂದು ದಿನ ಕಾಳುಕಡಿ ಹೀಗೆ ದಿನವಾರು ವಹಿವಾಟು ನಿಗದಿಪಡಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯ ಎಂದು ಕೆಲವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ‌.ವಿ. ಮಾತನಾಡಿ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಗದಿಪಡಿಸುವ ಸ್ಥಳಗಳಲ್ಲಿ ವಹಿವಾಟು ನಡೆಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋಧಾ ವಂಟಗೋಡಿ, ಎಸಿಪಿ ನಾರಾಯಣ ಭರಮನಿ, ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು, ವರ್ತಕರು ಸಭೆಯಲ್ಲಿ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ