ತಮಿಳುನಾಡು ಸಿಎಂ ಆಗುತ್ತಾರಾ ರಜನಿಕಾಂತ್? ಅವರೇ ಕೊಟ್ಟ ಉತ್ತರ
ತಮ್ಮ ರಾಜಕೀಯ ಭವಿಷ್ಯ ಸಂಬಂಧಿಸಿದಂತೆ ಮಾತನಾಡಿದ ರಜನಿಕಾಂತ್ ಸಿಹಿ ಸುದ್ದಿಯನ್ನು ನೀಡಿದರಾದರೂ ತಾವು ”ತಮಿಳುನಾಡಿನ ಸಿಎಂ ಆಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ತಲೈವಾ ರಜನೀಕಾಂತ್ ಏನೋ ಹೇಳುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ಮಿಶ್ರ ಭಾವವನ್ನು ರಜನಿಕಾಂತ್ ನೀಡಿದ್ದಾರೆ.
ಹೌದು, ತಮ್ಮ ರಾಜಕೀಯ ಭವಿಷ್ಯದ ಸುದ್ದಿಯನ್ನು ಖಚಿತಪಡಿಸಿದ ತಲೈವಾ, ತಾವು ತಮಿಳುನಾಡಿನ ಮುಂದಿನ ಸಿಎಂ ಆಗುವ ಆಸೆ ಹೊಂದಿಲ್ಲ ಎಂದರು.
ಆದರೆ ಒಬ್ಬ ಪ್ರಮಾಣಿಕ, ವಿದ್ಯಾವಂತ, ವಿಚಾರವಂತ, ಅಭಿವೃದ್ಧಿ ಪರ ವ್ಯಕ್ತಿಯನ್ನು ಸಿಎಂ ಅನ್ನಾಗಿ ಮಾಡುವುದಾಗಿ ರಜನಿಕಾಂತ್ ಹೇಳಿದ್ದಾರೆ. ಆ ಮೂಲಕ ತಾವು ‘ಹೈಕಮಾಂಡ್’ ಆಗಿರುವುದಾಗಿಯೂ ಸೂಚನೆ ನೀಡಿದ್ದಾರೆ.
ಆದರೆ ರಜನಿಕಾಂತ್ ತಮ್ಮ ಹೊಸ ಪಕ್ಷವನ್ನು ಯಾವಾಗ ಘೋಷಿಸುತ್ತಾರೆ. ಹೊಸ ಪಕ್ಷದ ಲಾಂಛನ, ಹೆಸರು ಇದಾವುದರ ಬಗ್ಗೆಯೂ ಗುಟ್ಟು ಬಿಟ್ಟುಕೊಟ್ಟಿಲ್ಲ.2017 ರಲ್ಲಿಯೇ ರಜನಿಕಾಂತ್ ಅವರು ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿದ್ದರು. ಆದರೆ ಇಂದಿನವರೆಗೆ ಪಕ್ಷದ ಹೆಸರು, ಲಾಂಛನ ಬಿಡುಗಡೆ ಮಾಡಿಲ್ಲ. ಇಂದಿನ ಸುದ್ದಿಗೋಷ್ಠಿಯಲ್ಲಿ ಪಕ್ಷದ ಹೆಸರು ಘೋಷಿಸುತ್ತಾರೆ ಎನ್ನಲಾಗಿತ್ತಾದರೂ ಅದು ಹುಸಿಯಾಗಿದೆ.
ತಮಿಳುನಾಡಿನ ಮತ್ತೊಬ್ಬ ಸ್ಟಾರ್ ನಟ ಕಮಲ್‌ಹಾಸನ್, ತಮ್ಮ ರಾಜಕೀಯ ಪಕ್ಷ ‘ಮಕ್ಕಳ್ ನಿಧಿ ಮಯಂ’ ಅನ್ನು 2018 ರಲ್ಲಿ ಘೋಷಿಸಿದರು. ಕಳೆದ ಲೋಕಸಭಾ ಚುನಾವಣೆಗೆ ತಮಿಳುನಾಡಿನ 39 ಹಾಗೂ ಪುದುಚೆರಿಯ ಒಂದು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಒಂದು ಸ್ಥಾನವನ್ನೂ ಮಕ್ಕಳ್ ನಿಧಿ ಮಯಂ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿಲ್ಲ.