ಕಲಬುರಗಿ: ವಿಶ್ವಾದ್ಯಂತ ಕೊರೊನಾ ವೈರಸ್ ಅಬ್ಬರಿಸುತ್ತಿರುವ ನಡುವಲ್ಲೇ, ಈ ಕುರಿತ ಸುದ್ದಿಗಳನ್ನು ಸಂಗ್ರಹಿಸುವ ಹಾಗೂ ಅದನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಮಾಧ್ಯಮ ಪ್ರತಿನಿಧಿಗಳೂ ಜೀವ ಕೈಯ್ಯಲ್ಲಿ ಹಿಡಿದು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಸುದ್ದಿ ಕೊಡುವ ಧಾವಂತದಲ್ಲಿ ಮಾಧ್ಯಮ ಪ್ರತಿನಿಧಿಗಳು ಸೋಂಕಿತರ ಹಾಗೂ ಅವರ ಒಡನಾಟದಲ್ಲಿ ಇರುವವರ ಸಂಪರ್ಕಕ್ಕೆ ಬರುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಇದಕ್ಕೆ ಕಲಬುರಗಿಯ ಪ್ರಕರಣವೇ ಸಾಕ್ಷಿ.
ಮಾಧ್ಯಮಕ್ಕೂ ತಟ್ಟಿದ ಕೊರೊನಾ ಬಿಸಿ..!
ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು ಹಾಗೂ ವಿಡಿಯೋ ಕ್ಯಾಮರಾಮನ್‌ಗಳು ಸುದ್ದಿಗಾಗಿ ಹಾಗೂ ದೃಶ್ಯಗಳಿಗಾಗಿ ಕೊರೊನಾ ವೈರಸ್ ಸೋಂಕಿತರು ಹಾಗೂ ಅವರ ಒಡನಾಟದಲ್ಲಿ ಇರುವವರ ಮನೆಗಳಿಗೆ ಎಡತಾಕುತ್ತಲೇ ಇರುತ್ತಾರೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುವ ಕೊರೊನಾ ಸೋಂಕು, ಮಾಧ್ಯಮ ಮಿತ್ರರಿಗೂ ತಟ್ಟದೇ ಬಿಡೋದಿಲ್ಲ. ಕಲಬುರಗಿಯ ಇಬ್ಬರು ವರದಿಗಾರರು ಮತ್ತು ಒಬ್ಬ ಕ್ಯಾಮರಾಮ್ಯಾನ್‌ಗೆ ತಪಾಸಣೆಗೆ ಒಳಗಾಗುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶಿಸಿರೋದೇ ಇದಕ್ಕೆ ಸಾಕ್ಷಿ. ಕೊರೊನಾ ವೈರಸ್‌ನಿಂದಾಗಿ ಮೃತರಾದ ವೃದ್ಧರ ಮಗನ ಬೈಟ್ ಪಡೆಯಲು ಹಾಗೂ ಆತನೊಂದಿಗೆ ಕಿರು
ಸಂದರ್ಶನ ನಡೆಸಲು ತೆರಳಿದ್ದ ವರದಿಗಾರರು ಹಾಗೂ ಕ್ಯಾಮರಾಮನ್‌ಗಳಿಗೆ ಇದೀಗ ಕೊರೊನಾ ಭೀತಿ ಶುರುವಾಗಿದೆ. ಖಾಸಗಿ ವಾಹಿನಿಯ ಈ ಇಬ್ಬರೂ ವರದಿಗಾರರು ಹಾಗೂ ಕ್ಯಾಮರಾಮನ್ ಇದೀಗ ತಪಾಸಣೆಗೆ ಒಳಪಡಬೇಕಿದೆ. ಹಾಗೂ ಅವರ ಆರೋಗ್ಯ ಪರಿಸ್ಥಿತಿ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಲಿದೆ.
ಜನರಿಗೆ ಮಾಹಿತಿ ತಲುಪಿಸಲು ಹೊರಡುವ ವರದಿಗಾರರಿಗೆ ಈ ಅಪಾಯಕಾರಿ ವೈರಸ್ ತಗುಲಿದರೆ ಜೀವಕ್ಕೇ ಎರವಾಗುವ ಸಾಧ್ಯತೆಗಳಿವೆ. ಹೀಗಾಗಿ, ಸುದ್ದಿ ನೀಡುವ ಭರದಲ್ಲಿ ಕೋರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆ ಹಾಗೂ ಆಸುಪಾಸಿನ ಸ್ಥಳಗಳಿಗೆ ತೆರಳಿ, ಮೃತನ ಕುಟುಂಬದ ಸದಸ್ಯರೊಂದಿಗೆ ಸಂದರ್ಶನ ನಡೆಸದೆ ಇರೋದು ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
