ಬೆಂಗಳೂರು, ಮಾ.14- ಕೊರೊನಾ ವೈರಸ್‍ನ ಪರಿಣಾಮ ಬಹುರಾಷ್ಟ್ರೀಯ ಕಂಪೆನಿ ಇನ್ಫೋಸಿಸ್‍ಗೂ ತಟ್ಟಿದ್ದು, ಬೆಂಗಳೂರಿನಲ್ಲಿರುವ ಐಐಪಿಎಂ ಇನ್ಫೋಸಿಸ್ ಕಚೇರಿಯ ಕಟ್ಟಡವನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದೆ. ಇನ್ಫೋಸಿಸ್‍ನ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಸಂಸ್ಥೆ ಹೈ ಅಲರ್ಟ್ ಆಗಿದ್ದು, ಸದರಿ ಉದ್ಯೋಗಿ ಕೆಲಸ ಮಾಡುತ್ತಿದ್ದ ಕಚೇರಿಯ ಐಐಪಿಎಂ ಕಟ್ಟಡವನ್ನು ಖಾಲಿ ಮಾಡಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಇನ್ಫೋಸಿಸ್‍ನ ಅಧಿಕಾರಿಗಳು, ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್‍ನ ಲಕ್ಷಣಗಳು ಕಂಡು ಬಂದಿರುವುದರಿಂದ ನಾವು ಮುನ್ನೆಚ್ಚರಿಕೆ ವಹಿಸಿದ್ದೇವೆ. ರಾಜ್ಯ ಸರ್ಕಾರದ ಸೂಚನೆಯಂತೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಿದ್ದೇವೆ ಎಂದರು.
ಐಐಪಿಎಂ ಕಟ್ಟಡದಲ್ಲಿದ್ದ ಎಲ್ಲಾ ಉದ್ಯೋಗಗಿಳನ್ನು ಹೊರಗೆ ಕಳುಹಿಸಲಾಗಿದ್ದು, ಇಡೀ ಕಟ್ಟಡದ ಸ್ವಚ್ಛತಾ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಶುಚಿಗೊಳಿಸಿದ ನಂತರ ಮತ್ತೆ ಅದೇ ಕಟ್ಟಡದಲ್ಲಿ ಕೆಲಸ ಪುನರಾರಂಭವಾಗಲಿದೆ. ಅನಗತ್ಯವಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು, ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
