ನವದೆಹಲಿ/ಮುಂಬೈ, ಮಾ.15- ದೇಶದಲ್ಲಿ ಮಾರಕ ಕೊರೊನಾ ಸೋಂಕಿನ ದೃಢೀಕೃತ ಪ್ರಕರಣಗಳ ಸಂಖ್ಯೆ 103ಕ್ಕೆ ಏರಿದೆ. ಅಲ್ಲದೆ ಇನ್ನೂ ಹಲವು ಶಂಕಿತರಲ್ಲಿ ಮತ್ತಷ್ಟು ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಮುಂದಿನ 24 ತಾಸುಗಳಲ್ಲಿ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕವಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ 31ಕ್ಕೇರಿದೆ. ಕೇರಳ ಎರಡನೆ ಸ್ಥಾನದಲ್ಲಿದ್ದು , ಅಲ್ಲಿ 26 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 11 ಪ್ರಕರಣಗಳು ದೃಢಪಟ್ಟಿವೆ.ಇದರಿಂದಾಗಿ ಅಲ್ಲಿ ಬಾಧಿತರ ಸಂಖ್ಯೆ 31ಕ್ಕೇರಿದ್ದು , ಆತಂಕಕ್ಕೆ ಕಾರಣವಾಗಿದೆ.
ಈ ಮಧ್ಯೆ ತೆಲಂಗಾಣದಲ್ಲಿ ಎರಡನೇ ಪ್ರಕರಣ ದಾಖಲಾಗಿದೆ. ಇಟಲಿಯಿಂದ ವಾಪಸಾಗಿದ್ದ ವ್ಯಕ್ತಿಯೊಬ್ಬರನ್ನು ಹೈದರಾಬಾದಿನ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೇ ಇನ್ನೆರಡು ಶಂಕಿತ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ. ರಕ್ತದ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಟ್ಟಿಯಲ್ಲಿರುವ ಕೆಲವೊಂದು ಚೆಕ್ ಪೋಸ್ಟ್ ಗಳನ್ನು ಹೊರತುಪಡಿಸಿ ಭಾರತ-ಬಾಂಗ್ಲಾದೇಶ, ಭಾರತ-ನೇಪಾಳ, ಭಾರತ-ಭೂತಾನ್, ಭಾರತ-ಮ್ಯಾನ್ಮಾರ್ ಗಡಿಗಳಲ್ಲಿನ ಎಲ್ಲಾ ಭೂ ಚೆಕ್ ಪೋಸ್ಟ್ ಗಳ ಮೂಲಕ ಇಂದು ಮಧ್ಯಾಹ್ನ 12 ರಿಂದ ಪ್ರಯಾಣಿಕರ ಸಂಚಾರವನ್ನು ನಿರ್ಬಂಧಿಸಲಾಗುವುದು.
ಭಾರತ-ಪಾಕಿಸ್ತಾನ ಗಡಿಯಲ್ಲಿ ನಾಳೆ ಮಧ್ಯಾಹ್ನ 12ರಿಂದ ಪ್ರಯಾಣಿಕರ ಸಂಚಾರವನ್ನು ನಿರ್ಬಂಧಿಸಲಾಗುವುದುಎಂದು ಕೇಂದ್ರ ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ನಿನ್ನೆಯಷ್ಟೇ ಕೊರೊನಾ ಸೋಂಕನ್ನು ಸೂಚಿತ ಪಿಡುಗು ಎಂದು ಘೋಷಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.