ನಿನ್ನೆ ಮೊನ್ನೆಯಿಂದ ಯಾರಿಗಾದ್ರೂ ಫೋನ್ ಮಾಡಿದ ತಕ್ಷಣ ಆ ಕಡೆಯಿಂದ ಕೆಮ್ಮುವ ಧ್ವನಿಯನ್ನ ಹಲವರು ಕೇಳಿರಬಹುದು. ಇದನ್ನ ಕೇಳಿದ ಅನೇಕರು ಅರೇ ಇದೇನಪ್ಪಾ ಇನ್ನೂ ರಿಂಗ್ ಆಗಿಲ್ಲ ಆಗ್ಲೇ ಯಾರೋ ಕೆಮ್ಮುತ್ತಿದ್ದಾರಲ್ಲ ಅಂತಲೂ ಅಂದುಕೊಂಡಿರಬಹುದು.? ಇದಕೆಲ್ಲಾ ಕಾರಣ ಬೇರೇನೂ ಅಲ್ಲ. ಸದ್ಯ, ವಿಶ್ವಕ್ಕೇ ತಲೆನೋವಾಗಿ ಪರಿಣಮಿಸಿರೋ ಕೊರೊನಾವೈರಸ್
ಹೌದು. ಕೊರೊನಾವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ದೂರ ಸಂಪರ್ಕ ಇಲಾಖೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿದೆ. ಮೊಬೈಲ್ ಬಳಕೆದಾರರ ಫೋನ್ ಕಾಲ್ ಕನೆಕ್ಟ್ ಆಗುವ ಮುಂಚೆ ಒಂದು ಕಾಲರ್ ಟ್ಯೂನ್ ಸೆಟ್ ಮಾಡಲಾಗಿದೆ. 30 ಸೆಕೆಂಡುಗಳ ಕಾಲರ್ ಟ್ಯೂನ್ ಇದಾಗಿದ್ದು, ಇದರಲ್ಲಿ ಕೊರೊನಾವೈರಸ್ನಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತದೆ. ಎಲ್ಲಾ ಟೆಲಿಕಾಂ ಸಂಸ್ಥೆಗಳು ಈ ಕಾಲರ್ ಟ್ಯೂನ್ನ ತಮ್ಮ ಗ್ರಾಹಕರಿಗೆ ತಪ್ಪದೇ ಸೆಟ್ ಮಾಡುವಂತೆ ಆದೇಶಿಸಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮನವಿಯ ಮೇರೆಗೆ ಕೇಂದ್ರ ದೂರ ಸಂಪರ್ಕ ಇಲಾಖೆ ಈ ರೀತಿಯ ಕಾಲರ್ ಟ್ಯೂನ್ ಸಿದ್ಧಪಡಿಸಿದೆ.
ಆದ್ರೆ, ಈಗಾಗಲೇ ಸಿನಿಮಾ ಹಾಡುಗಳು, ಇನ್ನಿತರ ವಿವಿಧ ಬಗೆಯ ಕಾಲರ್ ಟ್ಯೂನ್ಸ್ ಹೊಂದಿರುವ ಗ್ರಾಹಕರಿಗೆ ಈ ಕೊರೊನಾವೈರಸ್ ಆಡಿಯೋ ಮೆಸೇಜ್ ಅನ್ವಯವಾಗುವುದಿಲ್ಲ. ಈಗಾಗಲೇ ಕೇಂದ್ರ ಸರ್ಕಾರದ ಈ ಆದೇಶವನ್ನು ಬಿಎಸ್ಎನ್ಎಲ್ ಮತ್ತು ಜಿಯೋ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ್ದು, ಇನ್ನುಳಿದ ಟೆಲಿಕಾಂ ಸಂಸ್ಥೆಗಳೂ ಪಾಲಿಸಬೇಕಿದೆ.