Breaking News
Home / ರಾಜ್ಯ / ‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ

‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ

Spread the love

ಶಿರಸಿ: ಕೇಂದ್ರ ಸರಕಾರ ಕೋವಿಡ್ 19ರ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ಪಡೆದುಕೊಳ್ಳಲು ಮುಕ್ತ ಅವಕಾಶ ಪ್ರಕಟಿಸಿದೆ. ಸರಕಾರಗಳಿಂದ ಕೋವಿಡ್ ನಿಯಂತ್ರಣಕ್ಕೆ ಇದು ಅತ್ಯಂತ ಮಹತ್ವದ ನಡಯಾಗಿದೆ.

ಈ ನಡೆಯ ಬೆನ್ನಲ್ಲೇ ಶಿರಸಿಯ ವೈದ್ಯೆಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ದಾನಿಗಳು ‘ರಕ್ತದಾನ ಮಾಡಿ ಪ್ಲೀಸ್’ ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ಆರಂಭಿಸಿದ್ದಾರೆ.

ಏನಿದು ಅಡಚಣೆ?

ಕೋವಿಡ್ ನಿರೋಧಕ ಲಸಿಕೆ ಅಭಿಯಾನವು ಮೇ 1ರಿಂದ 18ರಿಂದ 45 ವರ್ಷದವರಿಗಾಗಿ ಆರಂಭವಾಗುತ್ತದೆ. ರಾಷ್ಟ್ರಿಯ ರಕ್ತ ಸಂಚರಣ ಪರಿಷತ್ (ಎಬಿಟಿಸಿ) ಪ್ರಕಾರ ಯಾವುದೇ ಲಸಿಕೆ ಪಡೆದ ನಾಲ್ಕು ವಾರಗಳ ತನಕ ರಕ್ತದಾನ ಮಾಡಲು ಅವಕಾಶ ಇಲ್ಲ. ಕೋವಿಡ್ ಲಸಿಕೆ ಎರಡು ಹಂತದಲ್ಲಿ ಪಡೆಯಬೇಕು. ಈ ಹಂತದಲ್ಲಿ ದೇಶದಲ್ಲಿ ರಕ್ತದ ಕೊರತೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕೊರೊನಾ ಭಯದದಲ್ಲಿ ಮೊದಲೇ ರಕ್ತದಾನಿಗಳ ಕೊರತೆ ಇದೆ. ಕಳೆದೊಂದು ವರ್ಷದಿಂದ ರಕ್ತದಾನ ಶಿಬಿರಗಳೂ ಹೆಚ್ಚು ನಡೆದಿಲ್ಲ.

ಪರಿಹಾರ ಏನು?

ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್‌ಲೈನ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಸುಮನ್ ದಿನೇಶ ಹೆಗಡೆ, ಲಸಿಕೆಗೂ ಮೊದಲು ರಕ್ತದಾನ ಮಾಡಿ ಎಂಬ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹಣಾ ಕೊರತೆ ನೀಗಿಸಲು ಇದೊಂದೇ ದಾರಿಯಾಗಿದೆ.

ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ, ಮನವಿಗಳ ಮೂಲಕ 18ರಿಂದ 45 ವರ್ಷದೊಳಗಿನ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವಯಸ್ಸಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಾರೆ. ಒಮ್ಮೆ ರಕ್ತದಾನ ಮಾಡಿದರೆ ಒಬ್ಬ ಪುರುಷ ದಾನಿಗೆ 3, ಮಹಿಳಾ ದಾನಿಗೆ 4 ತಿಂಗಳ ಕಾಲ ಬಿಡುವು ಬೇಕಿದೆ ಎಂಬುದೂ ಉಲ್ಲೇಖನೀಯ.

ಡಾ.ಸುಮನ್ ಹೆಗಡೆ, ಪ್ರಥಮ ಹಂತದ ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಲಸಿಕೆ ಪಡೆಯಬಹುದು. ಅಥವಾ ಈಗ ಕೊಟ್ಟಿಲ್ಲ ಎಂದರೆ ಎರಡನೇ ಲಸಿಕೆ ಪಡೆಯುವ ಮುನ್ನವೂ ರಕ್ತದಾನ ಮಾಡಬಹುದು ಎಂದು ಸಲಹೆ ಮಾಡುತ್ತಾರೆ.

ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿದರೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ. ಈ ಸಂದೇಶವನ್ನು ವಾಟ್ಸಪ್‌ಗಳಲ್ಲಿ ಹಾಕಿದಾಗ ದಾನಿಗಳೂ ಉತ್ಸುಕರಾಗಿ ಸ್ಪಂದಿಸುತ್ತಿದ್ದು, ತಾವೂ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುವದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಡಾ. ಸುಮನ್ ಹೆಗಡೆ.

ಅಪಘಾತದಲ್ಲಿ ಗಾಯಗೊಂಡು ರಕ್ತ ಕಳೆದುಕೊಂಡವರು, ಗರ್ಭಿಣಿ ಸ್ತ್ರೀಯರಿಗೆ, ಫೆಲಸೀಮಿಯಾ ರೋಗಿಗಳು, ರಕ್ತಹೀನತೆ ಉಳ್ಳವರು, ಕ್ಯಾನ್ಸರ್ ರೋಗಿಗಳ ಜೀವ ಉಳಿಸಲು ಬೇಕು ರಕ್ತ. ಈ ಕಾರಣದಿಂದ ಸಂಭಾವ್ಯ ರಕ್ತದ ಕೊರತೆ ಆಗದಂತೆ ಕೈ ಜೋಡಿಸಬೇಕಿದೆ.

ಕೈ ಜೋಡಿಸಿ

ಸಮುದಾಯ ಮನಸ್ಸು ಮಾಡಿದರೆ ಜೀವ ಉಳಿಸಬಹುದು. ಲಸಿಕೆಗೂ ಮೊದಲು ರಕ್ತದಾನ ಮಾಡಿ ಜೀವ ಉಳಿಸಲು ಕೈ ಜೋಡಿಸುತ್ತೇವೆ.

– ಡಾ. ಸುಮನ್ ಹೆಗಡೆ, ಪೆಥಾಲಜಿಸ್ಟ್


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ