ಬೆಂಗಳೂರು: ಬಡವರ ರಕ್ಷಣೆ ನಮ್ಮ ಸರ್ಕಾರದ ಕರ್ತವ್ಯ. ಸಾಲ ವಸೂಲಿ ಹೆಸರಲ್ಲಿ ಮೈಕ್ರೋ ಫೈನಾನ್ಸ್ಗಳಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ನಮ್ಮ ಸರ್ಕಾರ ಸುಗ್ರೀವಾಜ್ಞೆ ರೂಪಿಸಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಾಲ ವಸೂಲಿ ಮಾಡಲು ರೌಡಿಗಳ ಮೂಲಕ ಬೆದರಿಸಿ, ಕಾನೂನು ಕೈಗೆ ತೆಗೆದುಕೊಂಡು, ಬಡವರ ಮೇಲೆ ದಬ್ಬಾಳಿಕೆ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಇದನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈಗಾಗಲೇ ಬೆಳಗಾವಿ, ಬೀದರ್, ಮೈಸೂರು, ರಾಮನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಹಾಗೂ ಸಹಕಾರ ಸಚಿವರು ಸೂಚಿಸಿದ್ದಾರೆ. ಇದನ್ನು ನಿಯಂತ್ರಿಸಲು ಸುಗ್ರೀವಾಜ್ಞೆ ಸಿದ್ಧಪಡಿಸಲಾಗಿದ್ದು, ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಜಿಲ್ಲಾ ಕಚೇರಿಯಲ್ಲಿ ಇಂತಹ ಕಿರುಕುಳ ಪ್ರಕರಣಗಳಿಗೆ ದೂರು ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಇಂತಹ ಪ್ರಕರಣಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಈ ಸಹಾಯವಾಣಿಗೆ ಸಂಪರ್ಕಿಸಿ, ಬಡವರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳ ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ತಮ್ಮ ವಿಶ್ರಾಂತಿ ಬಳಿಕ ಸದ್ಯದಲ್ಲೇ ಪೊಲೀಸ್ ಅಧಿಕಾರಿಗಳು, ಆಯುಕ್ತರ ಜತೆ ಸಭೆ ನಡೆಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.