Breaking News
Home / Uncategorized / ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Spread the love

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ದ ತೊಡೆ ತಟ್ಟಿರುವ ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರು ತಮ್ಮ ಅಪಾರ ಭಕ್ತಗಣದ ಮೆರವಣಿಗೆ ನಡೆಸಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಧರ್ಮ ಸಮನ್ವಯ ಸಾರುವ ಉದ್ದೇಶದೊಂದಿವೆ ನಾಮಪತ್ರ ಸಲ್ಲಿಸಿದ್ದೇವೆ.

ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳ ಮೂಲಕ ಹೇಳಿದ್ದೇನೆ. ಯಾರ ವಿರುದ್ಧ ಮಾತನಾಡುತ್ತಿದ್ದೇನೋ ಅವರು ತೊಂದರೆ ಕೊಡುತ್ತಿದ್ದಾರೆ. ನೂರಾರು ವಿಘ್ನಗಳು ಬಂದಿವೆ. ಬಸವಾದಿ ಪರಂಪರೆ ನಾಡಿನಲ್ಲಿ ನಾಶವಾಗುತ್ತಿವೆ. ಭಸ್ಮ ಮತ್ತು ಭಂಡಾರ ಮಾಯವಾಗಿ ಬೇರೆ ಶಬ್ದಗಳು ಆಕ್ರಮಿಸಿಕೊಳ್ಳುತ್ತಿವೆ. ನಮ್ಮ ನಾಡಿಗೆ ತನ್ನದೆಯಾದ ಸಂಸ್ಕೃತಿ ಇದೆ ಎಂದು ಹೇಳಿದರು.

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ನಮ್ಮ ಕನ್ನಡ ನಾಡಿನ ಇತಿಹಾಸ ಪರಂಪರೆ ತಿರಸ್ಕಾರ ಮಾಡುವವರ ವಿರುದ್ಧ ಸಿಡಿದಿದ್ದೇವೆ. ನಾಲ್ಕು ಸಲ ಪಾರ್ಲಿಮೆಂಟ್ ಭವನ ಪ್ರವೇಶ ಮಾಡಿದವರು ಇದ್ದಾರೆ. ಅವರು ಬಸವಣ್ಣ, ಅಂಬೇಡ್ಕರ ಭಾವಚಿತ್ರ ತಮ್ಮ ಕಚೇರಿಯಿಂದ ತೆಗದು ಹಾಕಿದ್ದಾರೆ. ಮಹರ್ಷಿ ವಾಲ್ಮೀಕಿಗಳ ಭಾವಚಿತ್ರ ಸಹ ತೆಗೆದು ಹಾಕಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪ‌ ಮಾಡಿದರು.

ನಾಡಿನ ದಾರ್ಶನಿಕರು, ರೈತರು, ಮಹಾತ್ಮರನ್ನು, ಸಾಧು-ಸಂತರ, ಸರ್ವರ ಹಿತ ಬಯಸಬೇಕಿತ್ತು. ಅಧಿಕಾರ, ಹಣದ ಮದದಲ್ಲಿ ಎಲ್ಲರನ್ನೂ ನೋಡುತ್ತೇವೆಂಬ ದಾಷ್ರ್ಟ್ಯ ತೋರಿಸುತ್ತಿದ್ದಾರೆ. ಈ ಚುನಾವಣೆಯನ್ನು ನಾವು ಧರ್ಮಯುದ್ಧ ಎಂದು ಭಾವಿಸಿದ್ದೇವೆ. ಅವರು ಕ್ಷೇತ್ರ ಅಭಿವೃದ್ಧಿ ಬಿಟ್ಟು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದರು.

ನಾಡಿಗೆ ಆದರ್ಶವಾಗುವ ಬದಲಿಗೆ ಮಾಡಿಗೆ ಮಾರಕವಾಗಿದ್ದಾರೆ. ನಮ್ಮ ಯಾವ ಪ್ರಶ್ನೆಗೂ ಅವರಿಗೆ ಉತ್ತರ ಕೊಡುವ ಮನಸ್ಥಿತಿ ಇಲ್ಲ. ಇವರು ನಾಡಿಗೆ ಕಂಟಕವಾಗಿದ್ದಾರೆ. ಇವರ ಬದಲಾವಣೆಯೇ ನಮ್ಮ ಮೂಲ ಉದ್ದೇಶ. ಜನ ಹಣ ಭಯಕ್ಕೆ ಮತ ಚಲಾಯಿಸದೇ ಸ್ವಾಭಿಮಾನಕ್ಕಾಗಿ ಮತ ಚಲಾಯಿಸಬೇಕು ಎಂದು ಸ್ವಾಮೀಜಿ ಮನವಿ‌ ಮಾಡಿದರು.

ನಮ್ಮ ಬಲ ಕ್ಷೀಣಿಸಿಲ್ಲ. ಯಾವ ಮಠಾಧೀಶರು ಬರಬೇಡಿ ಎಂದಿದ್ದೇನೆ. ನಾನೇ ಬರೋದು ಬೇಡ ಎಂದಿದ್ದೇನೆ. ಮಠಾಧೀಶರನ್ನು ನಾನು ಚುನಾವಣೆಗೆ ಬಳಸಿಕೊಳ್ಳುವುದಿಲ್ಲ. ಕೇವಲ ಸಲಹೆ ಪಡೆಯಲು ಮಾತ್ರ ಮಠಾಧೀಶರ ಸಾಥ್ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಮಠ ಬಿಡಿಸುವಷ್ಟು ತೊಂದರೆ ಕೊಡುತ್ತಿದ್ದಾರೆ. ನಮ್ಮ ಜೊತೆ ಇದ್ದ ಮಠಾಧೀಶರನ್ನು ದೂರ ಮಾಡುತ್ತಿದ್ದಾರೆ. ಬ್ರಿಟಿಷರ ಕಾಲದ ವ್ಯವಸ್ಥೆ ಧಾರವಾಡದಲ್ಲಿ ನಡೆಯುತ್ತಿದೆ. ರಾಜ್ಯದ ಸಿಎಂ ಆಗಿದ್ದವರು ಎಂಎಲ್‌ಎ ಟಿಕೆಟ್ ಗಾಗಿ ಹೋರಾಡಬೇಕಿತ್ತು. ಅವರಿಗೆ ತೊಂದರೆ ಕೊಟ್ಟು ನಾಮಿನೇಷನ್ ಗೆ ಆಹ್ವಾನ ಕೊಟ್ಟಿದ್ದಾರೆ ಎಂದು ಹೇಳಿದರು. ಜೋಶಿ ಹೆಸರು ಹೇಳದೇ ಆರೋಪ ಮಾಡಲು ಕಾರಣ, ನನ್ನ ಬಾಯಲ್ಲಿ ಅವರ ಹೆಸರು ಪದೇ ಪದೇ ಬರುವುದು ಬೇಡ ಎಂದರು.

ಮಠದಲ್ಲಿ ಗೂಂಡಾಗಿರಿ: ನಿನ್ನೆ ರಾತ್ರಿ 20 ಜನ ಹೋಗಿ ನಮ್ಮ ಹಿರಿಯ ಗುರುಗಳಿಗೆ ಮಾನಸಿಕ ತೊಂದರೆ ಕೊಟ್ಟಿದ್ದಾರೆ. ಕೊನೆಗೆ ಅಲ್ಲಿನ ಭಕ್ತರು ಅವರನ್ನು ಹೊರಗೆ ಕಳುಹಿಸಿದ್ದಾರೆ. ರಾತ್ರಿ ಹೋಗಿ ಹಿರಿಯರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ನೀವು ಯಾವುದೇ ಪ್ರಯತ್ನ ಮಾಡಿದರೂ ಚುನಾವಣೆ ಕಣದಿಂದ ಹಿಂದೆ ಸರಿಯಲ್ಲ. ಕರ್ನಾಟಕದ ಬಹುತೇಕ ಎಲ್ಲ ಸ್ವಾಮೀಜಿ ನಮ್ಮ ವಿಚಾರ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಜೈನ್ ಮುನಿ ಹೇಳಿಕೆ ವಿಚಾರದಲ್ಲಿ ಅವರನ್ನು ನೇರವಾಗಿ ಫೋನ್ ನಲ್ಲಿ ಸಂಪರ್ಕಿಸಿದ್ದೆ. ನಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ವಿರೋಧಿಗಳು ತಮಗೆ ಬೇಕಾದ ಮಾಧ್ಯಮಗಳ ಮೂಲಕ ಆ ಹೇಳಿಕೆ ತಿರುಚಿದ್ದಾರೆ. ಚುನಾವಣೆ ನಿಲ್ಲುವಾಗ ಅವರನ್ನು ಸೋಲಿಸುವ ವಿಚಾರದಲ್ಲಿದ್ದೆ, ಈಗ ಗೆಲ್ಲಬೇಕು ಅನಿಸುತ್ತಿದೆ ಎಂದರು.

ಶಿರಹಟ್ಟಿ ಪೀಠದ ಗುರುಪರಂಪರೆಯ ವಿಜಯಪುರ ದರ್ಗಾದ ಗುರುಗಳು, ಸವಣೂರ ದೊಡ್ಡಹುಣಸೆ ಮಠದ ಸ್ವಾಮೀಜಿ, ರಾಜ್ಯ ರೈತ ಸಂಘದ ಅಧ್ಯಕ್ಷ ವಾಸುದೇವ ಮೇಟಿ, ವಕೀಲ ಬಳ್ಳೊಳ್ಳಿ ಈ‌ವೇಳೆ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Spread the loveವಿಜಯಪುರ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದರೂ ಆದೇಶ ಪಡೆಯದೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇಬ್ಬರು ಶಿಕ್ಷಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ