Home / ರಾಜಕೀಯ / ಯಶಸ್ವಿ ರೈತನಾದ ಯೋಧ! ಸರ್ಕಾರಿ ಕೋಟಾಗೆ ಮುಗಿಬೀಳದೆ ಭೂತಾಯಿಯ ಸೇವೆಗೆ ಜೀವನ ಮುಡಿಪಿಟ್ಟ ಮಿಲ್ಟ್ರಿ ಮ್ಯಾನ್

ಯಶಸ್ವಿ ರೈತನಾದ ಯೋಧ! ಸರ್ಕಾರಿ ಕೋಟಾಗೆ ಮುಗಿಬೀಳದೆ ಭೂತಾಯಿಯ ಸೇವೆಗೆ ಜೀವನ ಮುಡಿಪಿಟ್ಟ ಮಿಲ್ಟ್ರಿ ಮ್ಯಾನ್

Spread the love

17 ವರ್ಷ ಕಾಲ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ರೈತನಾದ ಕಥೆಯಿದು. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೋಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಎಂಬುವವರೇ ಇದೀಗ ಯೋಧನಾಗಿ ದೇಶ ಸೇವೆ ಸಲ್ಲಿಸಿದ ಬಳಿಕ ರೈತನಾಗಿ ಭೂತಾಯಿ ಸೇವೆ ಮಾಡುತ್ತಿರುವರು.ಸಾಮಾನ್ಯವಾಗಿ ಯೋಧರಾಗಿ ಸೇವೆ ಸಲ್ಲಿಸಿ ಸೇನಾ ಸೇವೆಯಿಂದ ನಿವೃತ್ತಿಯಾದ ಬಳಿಕ ಸೇನಾ ಕೋಟಾದಡಿ ಸರ್ಕಾರಿ ನೌಕರಿಗೆ ಸೇರಲು ಹೆಚ್ಚಿನ ನಿವೃತ್ತ ಯೋಧರು ಬಯಸುತ್ತಾರೆ.

ಆದರೆ ವಿಜಯಪುರ ಜಿಲ್ಲೆಯ ಯೋಧನೋರ್ವ ಬರೋಬ್ಬರು 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಯಾವುದೇ ಸರ್ಕಾರಿ ನೌಕರಿಯತ್ತ ಮುಖಮಾಡಿಲ್ಲ. ಆತ ಮುಖ ಮಾಡಿದ್ದು ಭೂಮಿ ತಾಯಿಯ ಸೇವೆಗೆ. ಇಂದಿನ ಜಾಗತೀಕರಣದ ಭರಾಟೆಯಲ್ಲಿ ಕೃಷಿ ಕ್ಷೇತ್ರ (Agriculture) ಸೊರಗಿದ್ದು ಅದರಲ್ಲೇ ಸಾಧನೆ ಮಾಡಲು ಮನಸ್ಸು ಮಾಡಿದ್ದಾರೆ ಈ ಯೋಧ. ಅಷ್ಟೇ ಅಲ್ಲ. ರಾಸಾಯನಿಕ ಮುಕ್ತ, ಸಾವಯವ ಯುಕ್ತ ಬೆಳೆ ಬೆಳೆಯಲು ನಿರ್ಧಾರ ಮಾಡಿ ಇದೀಗ ದಾಖಲೆ ಪ್ರಮಾಣದಲ್ಲಿ ಕಬ್ಬು ಬೆಳೆದಿದ್ಧಾರೆ. ರೈತನಾದ ಯೋಧ (Soldier) ಕುರಿತ ವರದಿ ಇಲ್ಲಿದೆ ನೋಡಿ (Success Story).

ಸತತ 17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿರೋ ಯೋಧ. ನಿವೃತ್ತಿ ಬಳಿಕ ಸರ್ಕಾರಿ ನೌಕರಿ ಕಡೆಗೆ ಮುಖ ಮಾಡದೇ ಕೃಷಿಯತ್ತ ಒಲವು ತೋರಿದ ಸೈನಿಕ. ಸಾವಯವ ಪದ್ದತಿಯಿಂದ ಕಬ್ಬು ಬೆಳೆದ ಮಿಲ್ಟ್ರಿ ಮ್ಯಾನ್. ಒಂದು ಎಕರೆಗೆ 120 ಟನ್ ಬೆಳೆ ಬೆಳದು ದಾಖಲೆ ನಿರ್ಮಾಣ….. ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರೋ ಕೃಷಿ ಕ್ಷೇತ್ರ ಸೊರಗಿ ಹೋಗಿದೆ. ಬರ ಪ್ರವಾಹ ಹವಾಮಾನ ವೈಪರಿತ್ಯ ಮಾರುಕಟ್ಟೆ ಸಮಸ್ಯೆ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಇರೋದು ಕೃಷಿ ಕ್ಷೇತ್ರಕ್ಕೆ ಶಾಪವಾಗಿವೆ.

ಇಷ್ಟರ ಮಧ್ಯೆ 17 ವರ್ಷಗಳ ಕಾಲ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ರೈತನಾದ ಕಥೆಯಿದು. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೋಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಎಂಬುವವರೇ ಇದೀಗ ಯೋಧನಾಗಿ ದೇಶ ಸೇವೆ ಸಲ್ಲಿಸಿ ರೈತನಾಗಿ ಭೂತಾಯಿ ಸೇವೆ ಮಾಡುತ್ತಿರುವರು. ಅದರಲ್ಲೂ ರಾಸಾಯನಿಕ ಔಷಧಿ ಗೊಬ್ಬರಗಳಿಂದ ಭೂಮಿ ಹಾಳಾಗುತ್ತಿದ್ದು ಭೂಮಿ ಉಳಿವಿವೆ ಸಾವಯವ ಪದ್ದತಿಯೇ ಶ್ರೇಷ್ಠವೆಂಬುದನ್ನು ಅರಿತ ಸಾಯಾಯಣ ಸಾಳುಂಕೆ ಸಾವಯವ ಪದ್ದತಿ ಮೂಲಕ ಕಬ್ಬು ಬೆಳೆದಿದ್ದಾರೆ. ಇವರು ಬೆಳೆದ ಕಬ್ಬು ದಾಖಲೆ ಪ್ರಮಾಣದಲ್ಲಿ ಬೆಳೆದಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಕೃಷಿಯಲ್ಲೇ ಸಾಧನೆ ಮಾಡಬೇಕೆಂದು ಪಣತೊಟ್ಟ ನಿವೃತ್ತ ಯೋಧನನ್ನು ಕಂಡು ನಕ್ಕಿದ್ದವರೇ ಹೆಚ್ಚು. ತನ್ನ ನೋಡಿ ನಕ್ಕವರಿಗೆ ಈಗ ಸಾಧನೆ ಮೂಲಕ ಉತ್ತರ ನೀಡಿದ್ದಾರೆ. ಸಾವಯವ ಪದ್ದತಿಯಲ್ಲಿ ಗೋಕೃಪಾಮೃತ, ಗೋಮೂತ್ರ, ಗೋವಿನ ಗೊಬ್ಬರ, ಜೀವಾಮೃತಗಳನ್ನಷ್ಟೇ ಕಬ್ಬಿನ ಬೆಳೆಗೆ ನೀಡಿದ್ದಾರೆ. 4.10 ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆದು ಹತ್ತಾರು ವರ್ಷಗಳಿಂದ ಕಬ್ಬು ಬೆಳೆದವರೂ ಬಾಯಿ ಮೇಲೆ ಕೈಇಟ್ಟುಕೊಳ್ಳುವಂತೆ ಮಾಡಿದ್ದಾರೆ.

ಇವರು ಬೆಳೆದ ಕಬ್ಬು ಒಂದು ಎಕರೆಗೆ ಸರಾಸರಿ 120 ಟನ್ ಗೂ ಆಧಿಕ ಇಳುವರಿ ಬಂದಿದೆ. ಸಾಮಾನ್ಯವಾಗಿ ಒಂದು ಎಕರೆಗೆ 50 ರಿಂದ 60 ಟನ್ ಮಾತ್ರ ಫಸಲು ಸಿಗುವುದು ವಾಡಿಕೆ. ಆದರೆ ನಾರಾಯಣ ಸಾಳುಂಕೆ ಅವರು ಬೆಳೆದ ಕಬ್ಬು ಒಂದು ಎಕರೆಗೆ 120 ಕ್ಕೂ ಆಧಿಕ ಟನ್ ತೂಕ ಬಂದಿದೆ. ಈ ಕುರಿತು ಸಾಧಕ ನಿವೃತ್ತ ಯೋಧ ಹಾಗೂ ರೈತ ತಾವು ಬೆಳೆದ ಕಬ್ಬಿನ ಫಸಲಿನ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.

2003 ರಲ್ಲಿ ಸೇನೆಗೆ ಸೇರಿದ್ದ ನಾರಾಯಣ ಸಾಳುಂಕೆ ದೆಹಲಿ, ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಬೆಳಗಾವಿಯಲ್ಲಿ ಸೆವೆನ್ ಮರಾಠಾ ಲೈಫ್​​ ಇನ್ಫೆಂಟ್ರಿಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. 2020 ರಲ್ಲಿ ಸೇವಾ ನಿವೃತ್ತಿಯಾಗಿ ಸ್ವಗ್ರಾಮ ಗೋಳಸಂಗಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಈ ಮೊದಲು ಸಾವಯವ ಪದ್ದತಿಯಲ್ಲಿ ದಾಖಲೆ ಪ್ರಮಾಣದಲ್ಲೇ ಈರುಳ್ಳಿ ಬೆಳೆ ಬೆಳೆದಿದ್ದರು. ಆದರೆ ಈರುಳ್ಳಿ ಮಾರುಕಟ್ಟೆ ದರ ಸಮಸ್ಯೆಯಿಂದ ಕಬ್ಬು ಬೆಳೆಯಲು ಮನಸ್ಸು ಮಾಡಿದ್ದಾರೆ.

ನಿವೃತ್ತ ಯೋಧ ನಾರಾಯಣ ಸಾಳುಂಕೆ ಅವರು ಎಚ್ ಎನ್ ಕೆ 13374 ತಳಿಯ ಕಬ್ಬನ್ನು ಬೆಳಗಾವಿ ಜಿಲ್ಲೆಯ ಸಂಕೇಶ್ವರಿಂದ ಡಾ ಸಂಜಯ ಪಾಟೀಲ್ ಎಂಬುವವರು ಸಂಶೋಧನೆ ಮಾಡಿದ್ದ ಕಬ್ಬಿನ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಒಂದು ಎಕರೆಗೆ ಸರಾಸರಿ 120 ಟನ್ ಬಂದಿದ್ದು ಖಾಸಗಿ ಸಕ್ಕರೆ ಕಾರ್ಖಾನೆಗೆ ಪ್ರತಿ ಟನ್ ಗೆ 2900 ನಂತೆ ಮಾರಾಟ ಮಾಡುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ 4.10 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬಿನಿಂದ ಸರಾಸರಿ 14.50 ಲಕ್ಷಕ್ಕೂ ಆಧಿಕ ಆದಾಯ ಬರುತ್ತಿದೆ. ಈ ಹಿಂದೆ ನಾರಾಯಣ ಸಾಳುಂಕೆ ಅವರು ಕಬ್ಬು ಬೆಳೆಯುವ ಬಗ್ಗೆ ಕುಹಕವಾಡಿದ್ದವರೇ ಇಂದು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನಿತ್ಯ ರೈತರ ದಂಡೇ ಇವರ ಜಮೀನಿಗೆ ಹರಿದು ಬರುತ್ತಿದೆ. ನೆರೆಯ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶದ ರೈತರೂ ಸಹ ಆಗಮಿಸಿ ಇವರು ಕಬ್ಬು ಬೆಳೆದಿದ್ರ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಇವರಂತೆ ತಾವೂ ಉತ್ತಮ ಕಬ್ಬಿನ ಇಳುವರಿ ಪಡೆಯಲು ಉತ್ಸುಕರಾಗಿದ್ದಾರೆ. ತಮ್ಮ ಜಮೀನಿಗೆ ಬಂದವರಿಗೆ ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಸಾವಯವ ಪದ್ದತಿಯ ಬಗ್ಗೆ ಅರಿವು ಮೂಡಿಸಿ ಉತ್ತಮ ಕಬ್ಬಿನ ಇಳುವರಿ ಪಡೆಯುವ ಸಲಹೆಗಳನ್ನು ನಿವೃತ್ತ ಯೋಧ ನೀಡುತ್ತಿದ್ದಾರೆ.

ದೇಶದ ಗಡಿ ಕಾಯುತ್ತಿದ್ದ ಯೋಧ ಸೇವಾ ನಿವೃತ್ತಿ ಬಳಿಕ ಅಪ್ಪಟ ರೈತನಾಗಿ ದಾಖಲೆ ಪ್ರಮಾಣದಲ್ಲಿ ಕಬ್ಬಿನ ಇಳುವರಿ ಪಡೆದಿದ್ದು ಅಷ್ಟು ಸರಳ ವಿಚಾರವಲ್ಲ. ಸತತ ಪರಿಶ್ರಮ ಸಾಧನೆ ಮಾಡಬೇಕೆಂಬ ಛಲ ಪ್ರಮುಖ ಕಾರಣವಾಗಿದೆ. ಅದರಲ್ಲೂ ರಾಸಾಯನಿಕ ಔಷಧಿಗಳ ಮುಕ್ತ ಕೃಷಿಯನ್ನು ಎಲ್ಲರೂ ಮಾಡಬೇಕೆಂಬ ಅರಿವು ಜಾಗೃತಿ ಮೂಡಿಸಲು ಈ ಮೂಲಕ ನಿವೃತ್ತ ಯೋಧ ನಾರಾಯಣ ಸಾಳುಂಕೆ ಹಿಡಿದ ದಾರಿ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದೆ. ಸಾವಯವ ಪದ್ದತಿಯಿಂದ ಔಷಧಿ ರಸಗೊಬ್ಬರಗಳಿಲ್ಲದೇ ಆಧಿಕ ಇಳುವರಿ ಪಡೆಯಬಹುದೆಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಸರ್ಕಾರ ಇಂತಹ ರೈತರಿಗೆ ಪ್ರೋತ್ಸಾಹ ನೀಡಬೇಕಿದೆ. ಈ ಮೂಲಕ ಸಾವಯವ ಪದ್ದತಿ ಕೃಷಿಗೆ ಉತ್ತೇಜನ ನೀಡಬೇಕಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ