Home / ರಾಜಕೀಯ / ಪುನಾರಂಭ ಆಗಲಿರುವ ಅಧಿವೇಶನ ಜಮೀರ್ ವಿವಾದಾತ್ಮಕ ಹೇಳಿಕೆ, ಡಿಕೆಶಿ ಕೇಸ್ ವಾಪಸ್ ವಿಚಾರ; ಹೆಚ್ಚಲಿದೆಯಾ ಸದನ ಕಾದಾಟ?

ಪುನಾರಂಭ ಆಗಲಿರುವ ಅಧಿವೇಶನ ಜಮೀರ್ ವಿವಾದಾತ್ಮಕ ಹೇಳಿಕೆ, ಡಿಕೆಶಿ ಕೇಸ್ ವಾಪಸ್ ವಿಚಾರ; ಹೆಚ್ಚಲಿದೆಯಾ ಸದನ ಕಾದಾಟ?

Spread the love

ಬೆಳಗಾವಿ/ಬೆಂಗಳೂರು: ಚಳಿಗಾಲದ ಅಧಿವೇಶನ ಶುರುವಾಗಿ ಮೊದಲ ಐದು ದಿನ ಕಳೆದಿದ್ದು, ಕಲಾಪ ಇನ್ನು ಐದು ದಿನ ಕಾಲ ಮಾತ್ರ ನಡೆಯಲಿದೆ.‌ ಸೋಮವಾರದಿಂದ ಪುನಾರಂಭ ಆಗಲಿರುವ ಅಧಿವೇಶನದಲ್ಲಿ ಸಚಿವ ಜಮೀರ್ ಅಹಮ್ಮದ್ ಹೇಳಿಕೆ ಹಾಗೂ ಡಿಕೆಶಿ ಶಿವಕುಮಾರ್ ಮೇಲಿನ ಸಿಬಿಐ ಕೇಸ್ ಅನುಮತಿ ವಾಪಸ್ ಪಡೆದಿರುವ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷ ಬಿಜೆಪಿ ಮುಂದಾಗಿದೆ.

ಇದರಿಂದ ಸದನದಲ್ಲಿ ಕದನ ಕಾವೇರುವ ಸಾಧ್ಯತೆ ಇದೆ.

ಮೊದಲ ವಾರದ ಐದು ದಿನದ ವಿಧಾನಸಭೆ ಕಲಾಪದಲ್ಲಿ ಬೆಳಗಾವಿ ಬಿಜೆಪಿ ಕಾರ್ಯಕರ್ತ ಮೇಲಿನ ಹಲ್ಲೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಬಳಿಕ ಜೆಡಿಎಸ್​ನಿಂದ ಹೆಚ್ ಡಿ ಕುಮಾರಸ್ವಾಮಿ ಸೇರಿ ಬಿಜೆಪಿ ಸದಸ್ಯರು ಬರ ನಿರ್ವಹಣೆ ಸಂಬಂಧ ಸರ್ಕಾರದ ವೈಫಲ್ಯಗಳ ಕುರಿತು ಚರ್ಚೆ ನಡೆಸಿದರು. ಸದನದಲ್ಲಿ ನಿರೀಕ್ಷಿತ ಕದನ ಕಾವು ಕಂಡು ಬರಲಿಲ್ಲ.

ಮೊದಲ ವಾರದ ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರಲ್ಲಿ ಸಂವಹನದ ಕೊರತೆಯಿಂದ ಗೊಂದಲ ಹೆಚ್ಚಾಗಿ ಕಂಡುಬಂತು.‌ ಪುನಾರಂಭ ಆಗುವ ಎರಡನೇ ವಾರದ ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ ಹೆಚ್ಚಿನ ಸಮನ್ವಯತೆ ಸಾಧಿಸಿ ಸಾಂಘಿಕ ಹೋರಾಟ ಮಾಡಿ ಗಮನ ಸೆಳೆಯಲು ಸಜ್ಜಾಗಿದೆ. ಬರದ ಚರ್ಚೆ ಬಳಿಕ ಉತ್ತರ ಕರ್ನಾಟಕ ಸಮಸ್ಯೆಗಳ ಸಂಬಂಧ ಚರ್ಚೆ ಆರಂಭವಾಗಲಿದೆ.

ಜಮೀರ್ ಹೇಳಿಕೆ, ಡಿಕೆಶಿ ಕೇಸ್ ವಾಪಸ್ ವಿಷಯ ಪ್ರಸ್ತಾಪ: ಡಿಕೆಶಿ ಪ್ರಕರಣ ಸಿಬಿಐ ತನಿಖೆ ಹಿಂಪಡೆದಿರುವ ವಿಚಾರ, ಜಮೀರ್ ಅಹ್ಮದ್ ಸ್ಪೀಕರ್ ಹೇಳಿಕೆ ಬಗ್ಗೆ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷ ಬಿಜೆಪಿ ಮುಂದಾಗಿದೆ. ಹೀಗಾಗಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ನಡುವೆ ಕದನ ಇನ್ನಷ್ಟು ರಂಗೇರುವ ಸಾಧ್ಯತೆ ಇದೆ.‌

ಸಚಿವ ಜಮೀರ್ ಅಹ್ಮದ್ ತೆಲಂಗಾಣ ಚುನಾವಣೆ ವೇಳೆ ಪ್ರಚಾರದ ಭಾಷಣದಲ್ಲಿ, ರಾಜ್ಯದಲ್ಲಿ ಬಿಜೆಪಿ ಶಾಸಕರು ಮುಸ್ಲಿಂ ಸ್ಪೀಕರ್ ಮುಂದೆ ನಮಸ್ಕರಿಸುವಂತೆ ಮಾಡಲಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ಪ್ರಸ್ತಾಪಿಸಲು ಬಿಜೆಪಿ ತೀರ್ಮಾನಿಸಿದೆ. ಕರ್ನಾಟಕ ವಿಧಾನಸಭೆಯಲ್ಲಿ ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿ ನಾಯಕರು ಕೈಮುಗಿದು, ತಲೆಬಾಗಿ ನಿಲ್ಲುತ್ತಾರೆ ಎಂದು ಹೇಳುವ ಮೂಲಕ ಸಚಿವ ಜಮೀರ್ ಸ್ಪೀಕರ್ ಸ್ಥಾನಕ್ಕೆ ಧರ್ಮದ ಬಣ್ಣ ಲೇಪಿಸಿ ಅಗೌರವ ತೋರಿದ್ದು, ಅವರ ಕ್ಷಮೆ ಯಾಚನಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಈ ವೇಳೆ ಸದನದಲ್ಲಿ ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಸ್ ಪಡೆದ ವಿಚಾರವನ್ನೂ ಸದನದಲ್ಲಿ ಪ್ರಸ್ತಾಪಿಸಲು ಬಿಜೆಪಿ ಮುಂದಾಗಿದೆ. ಈ ವಿಚಾರ ಸದನದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗುವುದು ಖಚಿತ. ತ‌ನಿಖೆಯಲ್ಲಿರುವ ಪ್ರಕರಣವನ್ನು ಪ್ರಭಾವ ಬಳಸಿ ಅನುಮತಿ ಹಿಂಪಡೆಯುವ ಮೂಲಕ ಸರ್ಕಾರ ಭ್ರಷ್ಟಾಚಾರ ಪರ ನಿಂತಿದೆ ಎಂಬ ವಾದದೊಂದಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಪ್ರಯತ್ನಿಸಲಿದೆ. ಕಾಂಗ್ರೆಸ್​ ಸರ್ಕಾರವೂ ಇದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ