Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರು – ಮೈಸೂರು ಹೈವೇಯ ದುಪ್ಪಟ್ಟು ಟೋಲ್ ವಿರೋಧಿಸಿ ಕರವೇ ಸ್ವಾಭಿಮಾನಿ ಸೇನೆ ಪ್ರತಿಭಟನೆ

ಬೆಂಗಳೂರು – ಮೈಸೂರು ಹೈವೇಯ ದುಪ್ಪಟ್ಟು ಟೋಲ್ ವಿರೋಧಿಸಿ ಕರವೇ ಸ್ವಾಭಿಮಾನಿ ಸೇನೆ ಪ್ರತಿಭಟನೆ

Spread the love

ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ದುಪ್ಪಟ್ಟು ಟೋಲ್ ವಸೂಲಿ ವಿರೋಧಿಸಿ ಹಾಗೂ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಪ್ರತಿಭಟನೆ ನಡೆಸಿತು.

ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ ನೇತೃತ್ವದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ನೂರಾರು ಜನ ಕಾರ್ಯಕರ್ತರು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಬಳಿ ಪ್ರತಿಭಟನೆ ನಡೆಸಿದ್ದಾರೆ‌.

ಸಾರ್ವಜನಿಕರ ತೆರಿಗೆ ಹಣದಿಂದ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದೆ. ಆದರೂ ಅದನ್ನ ಬಳಸಲು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತಿದೆ. ಸರಿಯಾದ ರಸ್ತೆ ಕಾಮಗಾರಿ ಆಗುವ ಮುನ್ನವೇ ಶ್ರೀರಂಗಪಟ್ಟಣದಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ. ರಸ್ತೆ ಉದ್ಘಾಟನೆಯಾದ ಬಳಿಕ‌ ಸರಿಸುಮಾರು 150 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಐವತ್ತು ಲಕ್ಷ ಪರಿಹಾರ ನೀಡಬೇಕು ಮತ್ತು ಕುಟುಂಬದವರಿಗೆ ಉದ್ಯೋಗ ನೀಡಬೇಕು ಸರ್ವಿಸ್ ರಸ್ತೆಯನ್ನ ನೀಡಬೇಕು ಹಾಗೂ ಆಸ್ಪತ್ರೆ, ಆಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ ಒತ್ತಾಯಿಸಿದರು.

ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು. ಹೆಚ್ಚು ಅಪಘಾತವಾಗುತ್ತಿರುವ ಕಡೆಗಳಲ್ಲಿ ರಸ್ತೆ ಸರಿಪಡಿಸಬೇಕು. ಮುಖ್ಯಮಂತ್ರಿಗಳು, ಪ್ರಧಾನಿಗಳು ಇತ್ತ ಗಮನಹರಿಸಬೇಕು. ಹೈವೇಗೆ ವಿಧಿಸಿರುವ ಹೆಚ್ಚಿನ ಟೋಲ್ ಶುಲ್ಕವನ್ನ ವಾಪಸ್ ಪಡೆಯದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಟೋಲ್ ಸಂಗ್ರಹಕ್ಕೆ ತಡೆ ನೀಡಲು ಸಿಎಂಗೆ ಮನವಿ ಮಾಡಿದ್ದ ಶಾಸಕರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ನಡುವೆ ಇರುವ ಶ್ರೀರಂಗಪಟ್ಟಣದಲ್ಲಿ ಟೋಲ್ ಶುಲ್ಕ ಸಂಗ್ರಹಿಸದಂತೆ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ತಡೆ ನೀಡುವಂತೆ ಶಾಸಕ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಜೂ.30ರಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಸರ್ವಿಸ್ ರಸ್ತೆಗಳು ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಬೆಂಗಳೂರಿನಿಂದ ಅಥವಾ ಮೈಸೂರಿನಿಂದ ಹೊರಟಾಗ ಒಂದು ಬಾರಿ ಟೋಲ್ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಕಟ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರಿಗೆ ದುಪ್ಪಟ್ಟು ಹೊರೆಯಾಗಲಿದೆ. ಅಲ್ಲದೇ, ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದರು. ಸರ್ವಿಸ್ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ಮುಗಿಯುವವರೆಗೂ ಶ್ರೀರಂಗಪಟ್ಟಣ ಟೋಲ್‌ನಲ್ಲಿ ಶುಲ್ಕ ಸಂಗ್ರಹ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ