Breaking News
Home / ರಾಜಕೀಯ / “ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” 

“ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” 

Spread the love

ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾಗಿರುವಂತೆ ಎಲ್ಲಾ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುತ್ತಾರೆ. ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದು, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದು ವ್ರತಖಂಡದಲ್ಲಿ ಮತ್ತು ಪುರಾಣಗಳಲ್ಲಿ ಉಲ್ಲೇಖವಿದೆ.  ಪಂಚಾಂಗಗಳೂ ಇದನ್ನೇ ಹೇಳುತ್ತವೆ. 

ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇದೆ. ಎಲ್ಲಾ ಶಾಸ್ತ್ರಗಳು ಮತ್ತು ಪೌರಾಣಿಕ ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನವನ್ನು ಯುಗಾದಿ ಎಂದು ಹೇಳಲಾಗಿದೆ. ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವನ್ನು ಸಹ ಯುಗಾದಿಯೆಂದು ಹೇಳಲಾಗಿದೆ.

ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದು, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದು ಹೇಳಲಾಗುತ್ತದೆ. ಹಿಂದೂಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದದಿಂದ ಆರಂಭಿಸುತ್ತಾರೆ. ಯುಗಾದಿಯು ಚಂದ್ರಮಾನದ ಸಂವತ್ಸರದ ಆರಂಭದ ದಿನ. ವರಾಹ ಮಿಹಿರಾಚಾರ್ಯನು ವರ್ಷಾರಂಭವನ್ನು ಚೈತ್ರ ಮಾಸವೆಂದು ಹೇಳಿದ್ದಾನೆ. 

ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತೀ ಶ್ರೇಷ್ಠ  ಮೂಹೂರ್ತವೆಂದು ಭಾರತೀಯರು ನಂಬಿದ್ದಾರೆ. ವರ್ಷದ ಶುಭ ದಿನವಾದ ಯುಗಾದಿಯನ್ನು ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳಲಾಗುತ್ತದೆ. 

ಯುಗಾದಿ ಹಬ್ಬವನ್ನು ಚಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂದು ಎರಡು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ,  ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೆ ನಿಧಾನವಾಗಿ ಸಂಚರಿಸಿದಂತೆ  ಕಾಣುತ್ತವೆ. ಜ್ಯೋತಿಷ್ಯ ಶಾಸ್ತ್ರದಂತೆ ಮೊದಲ ನಕ್ಷತ್ರ ಅಶ್ವಿನಿಯಾಗಿದೆ. ಅಂದರೆ ಮೇಷ ರಾಶಿಯ 0-13:20 ಡಿಗ್ರಿ. ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧ ಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ. ಇದೇ ಚಂದ್ರಮಾನ ಯುಗಾದಿ. ಅಶ್ವಿನಿ ನಕ್ಷತ್ರಕ್ಕೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಹೊಸವರ್ಷ ಎಂದು ಹೇಳುವರು. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಇದು ಏಪ್ರಿಲ್ 14 ನೇ ತಾರೀಖಿಗೆ ಬರುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗೆ ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ 11 ರಿಂದ 13 ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಂದ್ರಮಾನ ಯುಗಾದಿಯಾಗುತ್ತದೆ.

ದಕ್ಷಿಣ ಭಾರತೀಯರು ಚಂದ್ರಮಾನವನ್ನು ಅನುಸರಿಸಿ ಚೈತ್ರಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುತ್ತಿರುವರು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್‍ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು.

ಕರ್ನಾಟಕದಲ್ಲಿ `ಯುಗಾದಿ’, ಮಹಾರಾಷ್ಟ್ರದಲ್ಲಿ `ಗುಡಿಪಾಡವಾ’, ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ `ಹೊಸ ವರ್ಷದ ಹಬ್ಬ’ವೆಂದು, ಉತ್ತರ ಭಾರತದಲ್ಲಿ `ಬೈಸಾಖಿ’ ಎಂದು ಆಚರಿಸಲ್ಪಡುತ್ತದೆ.

ವಿದೇಶಿಯರ ಮತ್ತು ಭಾರತೀಯರ ಹೊಸ ವರ್ಷದಲ್ಲಿ ತುಂಬ ವ್ಯತ್ಯಾಸವಿದೆ. ಜನವರಿ 1 ರಂದು ಶುರುವಾಗುವ ಹೊಸ ವರ್ಷದಲ್ಲಿ ಜನರು ಕುಡಿದು ಕುಪ್ಪಳಿಸಿ ರಾತ್ರಿ 12  ಗಂಟೆಯ ನಂತರ ಹೊಸ  ವರ್ಷ ಆಚರಿಸುತ್ತಾರೆ. ಅಹಿತಕರ ಘಟನೆಗಳನ್ನು ತಡೆಯಲು ಸರ್ಕಾರ ಕಠೋರ ಕ್ರಮ ತೆಗೆದುಕೊಳ್ಳುತ್ತದೆ. ಯಾವುದೇ  ವಿಶೇಷ ಬದಲಾವಣೆ ಪಕೃತಿಯಲ್ಲಿ ಕಾಣುವುದಿಲ್ಲ. ಆದರೆ ಯುಗಾದಿಯ ಸಮಯದಲ್ಲ್ಲಿ ವಾತಾವರಣದಲ್ಲಿ ಚಳಿಯು ಕಡಿಮೆಯಾಗಿ ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವುದು ಕಂಡು ಬರುತ್ತದೆ.

ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ. `ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. 

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಮ್ಮ-ತಮ್ಮ ದೇವರನ್ನು ಪೂಜಿಸುತ್ತಾರೆ. ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಕೋಣೆಯ ಬಾಗಿಲಿಗೆ ಎಳೆಯ ಹಸಿರು ಮಾವಿನೆಲೆ, ಮಧ್ಯೆ ಬೇವಿನ ಎಲೆ ಮತ್ತು ಹೂಗಳ ಗೊಂಚಲು ಸೇರಿಸಿ ತೋರಣವನ್ನು ಕಟ್ಟುವರು. ಮನೆಯ ಮುಂದೆ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲಿನ ಸಂಕೇತವಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ಅಂದು ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಊಟದ ಮೊದಲು ಸೇವಿಸುವರು.  ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ನಾವು ಬೇವಿನ ಸಮಾನವಾದ ದು:ಖ, ಅಶಾಂತಿಯ, ಪ್ರಪಂಚದಲ್ಲಿದ್ದರೂ ಬೆಲ್ಲದ ಸಮಾನವಾದ ಶಾಂತಿ, ಅತೀಂದ್ರಿಯ ಸುಖ, ಆತ್ಮೀಯತೆ, ಸ್ನೇಹ, ಮಧುರತೆಯ ಅನುಭವ ಮಾಡಬೇಕು ಎಂಬ ನಿಜ ಅರ್ಥವನ್ನು ಅರಿತುಕೊಳ್ಳಬೇಕು. 

ಬೇವಿನ ಎಲೆಯೂ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದು. 

‘ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ !

 ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ!!’ 

ಆಯುರ್ವೇದವು ಬೇವಿನ ಮಹಿಮೆಯನ್ನು ಸಾರಿದೆ. ಅದರರ್ಥ ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅನಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡಬೇಕು ಎಂದು ಹೇಳಲಾಗಿದೆ.

ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು. ಎಲ್ಲಾ ರಾಶಿಗಳ ಫಲಾಫಲಗಳನ್ನು ವಿವರಿಸುವರು. ಪ್ರತಿವಷರ್óದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು. ಪಂಚಾಂಗ  ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇರುವವು. 

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯ ದಿನ ಪ್ರತಿಯೊಂದು ಮನೆಯ ಮುಂದೆಯೂ ಗುಡಿಯನ್ನು ನಿಲ್ಲಿಸುವ ಪದ್ಧತಿ ಇರುವುದರಿಂದ ಯುಗಾದಿಯನ್ನು ‘ಗುಡಿಪಾಡವಾ’ ಎಂದು ಕರೆಯುವರು. ಗುಡಿ ಎಂದರೆ ಧ್ವಜ. ಒಂದು ಕೋಲಿನ ತುದಿಗೆ ರೇಷ್ಮೆ ಬಟ್ಟೆ ಏರಿಸಿ, ಅದರ ಮೇಲೆ ಬೆಳ್ಳಿ ಅಥವಾ ಹಿತ್ತಾಳೆಯ ಸಣ್ಣ ಬಿಂದಿಗೆಯನ್ನು ಕಟ್ಟಿ ಬೇವು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುವರು. ಮಹಾಭಾರತದಲ್ಲಿ ಇದರ ಪ್ರಸ್ತಾಪವಿದೆ. ಅಂದು ‘ಪುರಣಪೋಳಿ’ ಸಿಹಿಯನ್ನು ಮಾಡುವರು. ಕರ್ನಾಟಕದಲ್ಲಿ ಹೋಳಿಗೆ, ಆಂಧ್ರದಲ್ಲಿ ಒಬ್ಬಟ್ಟು ಮಾಡುವ ಪದ್ಧತಿ ಇದೆ. ಕರಾವಳಿಯಲ್ಲಿ ಖಣಿ ಇಡುವ ಸಂಪ್ರದಾಯವಿದೆ. ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ತೆಂಗಿನಕಾಯಿ, ಸೌತೆಕಾಯಿ, ಹೊಸ ಬಟ್ಟೆ, ರವಿಕೆ ಖಣ, ಚಿನ್ನ, ಬತ್ತದ ತೆನೆ, ಹಣ್ಣ್ಣು ಹಂಪಲು, ದೇವರ ಪ್ರತಿಮೆ ಜೋಡಿಸಿ ಒಂದು ಕನ್ನಡಿ ಮುಂದೆಮ ದೇವರು ಸಮೇತ ಎಲ್ಲವೂ ಕಾಣುವಂತೆ ಇಡುತ್ತಾರೆ. ಯುಗಾದಿಯ ಹಬ್ಬದಂದು ಬೆಳಿಗ್ಗೆ ಎದ್ದು ಪೂಜೆ ಮಾಡಿ, ಕನ್ನಡಿಯಲ್ಲಿ ದೇವರ ದರ್ಶನ ಪಡೆಯುತ್ತಾರೆ. ತದ ನಂತರ ದೇಗುಲಕ್ಕೆ ಹೋಗುವರು, ಸಿಹಿ ಊಟ, ಗುರು ಹಿರಿಯರ ಭೇಟಿ, ಪಂಚಾಂಗ ಶ್ರವಣ ಮಾಡುತ್ತಾರೆ. 

ಯುಗಾದಿಯ ಮಾರನೆಯ ದಿನವೂ ಹಬ್ಬದ ವಾತಾವರಣವೇ ಇರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕ್ಕರಿಸುವರು. ಅಂದು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ.  ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರಿಗೆÉ ಏನನ್ನು ನೀಡುತ್ತಾರೆಯೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಅಂದು ಬಿದಿಗೆಯ ದಿನ, ಚಂದ್ರದರ್ಶನ ಮಾಡುವರು.

`ಯುಗಾದಿ’ ಎಂಬ ಶಬ್ದವು ಸಂಸ್ಕøತದ `ಯುಗ’ ಮತ್ತು `ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ.  ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ.  `ಆದಿ’ ಎಂದರೆ ಪ್ರಾರಂಭ, ಪೂರ್ವಕಾಲ ಎಂದಾಗುತ್ತದೆ.

ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮ ಸಮಯ, ಸಂಗಮಯುಗವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ  ಜ್ಞಾನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ `ಯುಗಾದಿ’. ಈ ಯುಗಾದಿಯ ಸಮಯದಲ್ಲಿ ನಿರಾಕಾರ ಶಿವನು ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ, ಹೊಸ ಸೃಷ್ಟಿಯ ಸ್ಥಾಪನೆ ಮಾಡುವನು.  ಕಲಿಯುಗದ ತಮೋಪ್ರಧಾನ ಮನುಷ್ಯಾತ್ಮರಿಗೆ  ಸತ್ಯ ಜ್ಞಾನವನ್ನು ನೀಡಿ, ಅವರಿಗೆ ಸಹಜ ರಾಜಯೋಗವನ್ನು ಕಲಿಸಿ, ಅವರನ್ನು ಸ್ವರ್ಗ ಅಥವಾ ರಾಮರಾಜ್ಯಕ್ಕಾಗಿ ಬೇಕಾಗುವ ಶ್ರೀ ಲಕ್ಷ್ಮೀ-ನಾರಾಯಣ, ಶ್ರೀರಾಮ-ಸೀತೆಯರ ಸಮಾನ ದೇವಾತ್ಮರನ್ನಾಗಿ ಮಾಡುತ್ತಾನೆ. ಅದಕ್ಕಾಗಿಯೇ ರಾಮಾಯಣದಲ್ಲಿ ಇಂದ್ರನು ವ್ಶೆಜಯಂತಿ ಮಾಲೆಯನ್ನು ಹಾಗೂ ಚಿನ್ನದ ಕಲಶವನ್ನು ವಸುವಿಗೆ ನೀಡಿದ ದಿನವೆಂದು ಹೇಳಲಾಗುತ್ತದೆ.

ನಿಜವಾಗಿ ಸತ್ಯ `ಯುಗಾದಿ’ ಸಂಗಮ ಯುಗವಾಗಿದೆ. ಈ ಯುಗ ಬರುವುದು ಕಲ್ಪಕ್ಕೊಮ್ಮೆ ಮಾತ್ರ. ಅನೇಕ ಕಾಲಚಕ್ರಗಳು ಅನಾದಿ ಕಾಲದಿಂದ ನಡೆಯತ್ತಾ ಬಂದಿವೆ. ಉದಾಹರಣೆಗೆ 60 ಸೆಕೆಂಡಿಗೆ 1 ನಿಮಿಷ, 60 ನಿಮಿಷಕ್ಕೆ 1 ಗಂಟೆ, 24 ಗಂಟೆಗೆ 1 ದಿನ, 7 ದಿನಗಳಿಗೆ 1 ವಾರ, 30 ದಿನಗಳಿಗೆ 1 ತಿಂಗಳು, 12 ತಿಂಗಳಿಗೆ 1 ವರ್ಷದಂತೆ, ಈ ಸೃಷ್ಟಿ ನಾಟಕವು 5000 ವರ್ಷದ್ದಾಗಿದೆ. ಈಶ್ವರೀಯ  ಜ್ಞಾನದಪ್ರಕಾರ ಸತ್ಯಯುಗಕ್ಕೆ 1250 ವರ್ಷ, ತ್ರೇತಾಯುಗಕ್ಕೆ 1250 ವರ್ಷ, ದ್ವಾಪರಯುಗಕ್ಕೆ 1250 ವರ್ಷ, ಕಲಿಯುಗಕ್ಕೆ 1250 ವರ್ಷಗಳಂತೆ ಒಟ್ಟು ಇಡೀ 4 ಯುಗಕ್ಕೆ 5000 ವರ್ಷಗಳಿವೆ.  ಈ ರೀತಿ ನಾಲ್ಕು ಯುಗಗಳನ್ನು ಸೇರಿ ಒಂದು ಕಲ್ಪ ಆಗುತ್ತದೆ. ಈ ಕಾಲಚಕ್ರ 5000 ವರ್ಷಕ್ಕೊಮ್ಮೆ ಪುನರಾವರ್ತನೆಯಾಗುತ್ತದೆ.  ಪರಮಪಿತ ಪರಮಾತ್ಮನಾದ ಶಿವನು ಸಂಗಮಯುಗದಲ್ಲಿ [ಕಲಿಯುಗದ ಅಂತ್ಯ  ಹಾಗೂ ಸತ್ಯಯುಗದ ಆರಂಭದ ಸಮಯ] ಒಮ್ಮೆ ಮಾತ್ರ ಈ ಭೂಮಿಗೆ ಬಂದು ವಿಶ್ವಪರಿವರ್ತನೆ ಮಾಡುತ್ತಾನೆ. ಅದರ ಸ್ಮರಣಾರ್ಥವಾಗಿಯೇ `ಯುಗಾದಿ’ಯನ್ನು ವರುಷ-ವರುಷ ಆಚರಿಸುತ್ತಾರೆ.

ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯವಾಗಿದೆ. ಹೀಗೆ ಯುಗಾದಿಯು `ಭಕ್ತರಿಗಾಗಿ, ವಿಶಾಲ ಹೃದಯದ ಶಿವ-ಶರಣೆಯರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ, ಶಿವನು ಭಕ್ತರ ಕರೆಗೆ ಓಗೊಟ್ಟು, ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ’ ಎಂಬ ಪರಮ ಸಂದೇಶವನ್ನು ನೀಡುವ ಮಹಾನ್ ಪರ್ವವೇ ಯುಗಾದಿಯಾಗಿದೆ. ಅನೇಕ ವೈರಾಣುಗಳ, ಎಚ್3ಎನ್2 ಮತ್ತು ಕಾಯಿಲೆಗಳ ಕಠಿಣ ಕಾಲದಲ್ಲಿ ಹಬ್ಬದ ಆಚರಣೆ ಕಷ್ಟಕರವಾಗಿದೆ. ಇನ್ನೊಂದು ಕಡೆ ಜೀವನಾವಶ್ಯಕ ವಸ್ತಗಳ ಬೆಲೆ ಗಗನಕ್ಕೇರಿದೆ. ಈ ಸಂಕಷ್ಟದ ಸಮಯದಲ್ಲಿ ಕರುಣಾಮಯಿ ದಯಾಸಾಗರನಾದ ಪರಮಾತ್ಮನ ಕೃಪೆಯು ನಮ್ಮ ಮೇಲೆ ಸದಾ ಇರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ.

“ಯುಗ ಯುಗಾದಿ ಕಳೆದರೂ,

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ” 

     

–ವಿಶ್ವಾಸ. ಸೋಹೋನಿ.,

 


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ