Breaking News
Home / ಜಿಲ್ಲೆ / ಹಾವೇರಿ / ‘ಸ್ಕಾಲರ್‌ಷಿಪ್‌ಗೆ ಕನ್ನ’ ಪ್ರಕರಣ: ತನಿಖೆಗೆ ಹಿನ್ನಡೆ

‘ಸ್ಕಾಲರ್‌ಷಿಪ್‌ಗೆ ಕನ್ನ’ ಪ್ರಕರಣ: ತನಿಖೆಗೆ ಹಿನ್ನಡೆ

Spread the love

ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2019ರಿಂದ ಇಲ್ಲಿಯವರೆಗೆ ‘ಅಕೌಂಟೆಂಟ್‌ ಜನರಲ್‌ ಆಡಿಟ್‌’ ನಡೆಯದ ಕಾರಣ ‘ಸ್ಕಾಲರ್‌ಶಿಪ್‌ಗೆ ಕನ್ನ’ ಪ್ರಕರಣದ ತನಿಖೆಯ ಮೇಲೆ ಕಾರ್ಮೋಡ ಕವಿದಿದೆ.

 

‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಸಾಲದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು 2022ರ ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು. ನಂತರ ಕಾಲೇಜಿನ ಆಂತರಿಕ ತನಿಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ತನಿಖೆ ಆಧರಿಸಿ, ಇಬ್ಬರು ಅಧೀಕ್ಷಕರು ಸೇರಿ ಐವರು ನೌಕರರನ್ನು ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲ, ನಿವೃತ್ತ ಪ್ರಾಂಶುಪಾಲ ಸೇರಿ 6 ನೌಕರರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ.

ಷೋಕಾಸ್‌ ನೋಟಿಸ್‌:

ಹಾವೇರಿಯ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ, ಕಾಲೇಜಿನ ಅವ್ಯವಹಾರದ ತನಿಖೆ ಜೂನ್‌ ಕೊನೆಯ ವಾರದಲ್ಲಿ ಆರಂಭಗೊಂಡಿತು. 2007ರಿಂದ 2022ರವರೆಗಿನ ಕಾಲೇಜಿನ ದಾಖಲೆಗಳನ್ನು ತನಿಖಾ ತಂಡ ಪರಿಶೀಲನೆ ನಡೆಸಿತು. ತಾಂತ್ರಿಕ ಶಿಕ್ಷಣ ಇಲಾಖೆಯ ತನಿಖಾ ವರದಿ ಆಧರಿಸಿ, ಆರೋಪಿಗಳಿಗೆ ಷೋಕಾಸ್‌ ನೋಟಿಸ್‌ ನೀಡಿ, ಉತ್ತರವನ್ನೂ ಪಡೆಯಲಾಗಿದೆ.

ಲೆಕ್ಕಪರಿಶೋಧನೆಗೆ ಶಿಫಾರಸು:

‘ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ಮತ್ತು ನಡೆದಿರುವ ಅವ್ಯವಹಾರದ ಮೊತ್ತವನ್ನು ಲೆಕ್ಕ ಹಾಕುವುದು ಆಂತರಿಕ ತನಿಖಾ ತಂಡದ ವ್ಯಾಪ್ತಿಯನ್ನು ಮೀರಿರುವ ಕಾರಣ ಪೊಲೀಸ್‌ ತನಿಖೆಯನ್ನೊಳಗೊಂಡಂತೆ ‘ವಿಶೇಷ ಲೆಕ್ಕ ಪರಿಶೋಧನೆ’ಯನ್ನು ಸರ್ಕಾರದಿಂದ ಕೈಗೊಳ್ಳುವುದು ಸೂಕ್ತ’ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ತನಿಖಾ ತಂಡ ಶಿಫಾರಸು ಮಾಡಿದೆ.

‘ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಿರ್ವಹಿಸಿರುವ ಬಹುತೇಕ ವಹಿವಾಟುಗಳ ನೈಜ ಮತ್ತು ವಾಸ್ತವಿಕ ಚಿತ್ರಣವನ್ನು ಅರಿಯಲು ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ. ಕೇವಲ ಪರಿಶೀಲನೆಗೆ ಲಭ್ಯಪಡಿಸಿದ ಬ್ಯಾಂಕ್‌ ಖಾತೆಯ ಭಾಗಶಃ ಮಾಹಿತಿಗಳು ಮತ್ತು ಇತರೆ ದಾಖಲೆಗಳ ಆಧಾರದಲ್ಲಿ ಕಂಡುಬಂದ ಅಂಶಗಳನ್ನು ಮಾತ್ರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಹಾಗಾಗಿ ಪೂರ್ಣ ಪ್ರಮಾಣದ ವಿಶೇಷ ಲೆಕ್ಕ ಪರಿಶೋಧನೆ ಅವಶ್ಯ’ ಎಂದು ತನಿಖಾ ತಂಡ ಒತ್ತಿ ಹೇಳಿದೆ. ‌

ಚಾರ್ಜ್‌ಶೀಟ್‌ ವಿಳಂಬ:

‘ಅವ್ಯವಹಾರದ 6 ಆರೋಪಿಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಶೇ 50ರಷ್ಟು ದಾಖಲೆಗಳು ಮಾತ್ರ ಕಾಲೇಜಿನಲ್ಲಿ ಲಭ್ಯವಾಗಿದ್ದು, ಕೆಲವು ದಾಖಲೆಗಳು ಸಿಕ್ಕಿಲ್ಲ. ಪ್ರತಿ ವರ್ಷ ಆಡಿಟ್‌ ನಡೆಯದ ಕಾರಣ ಅವ್ಯವಹಾರದ ಆಳ-ಅಗಲ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ‘ಅಕೌಂಟೆಂಟ್‌ ಜನರಲ್‌ ಆಡಿಟ್‌’ ನಡೆದರೆ, ನ್ಯಾಯಾಲಯಕ್ಕೆ ಎರಡು ತಿಂಗಳೊಳಗೆ ದೋಷಾರೋಪಣ ಪಟ್ಟಿ ಸಲ್ಲಿಸಬಹುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆಡಿಟ್‌ ನಡೆಸಲು ಮೀನ-ಮೇಷ

‘ಅಕೌಂಟೆಂಟ್‌ ಜನರಲ್‌ ಆಡಿಟ್‌’ ವರದಿಯನ್ನು ಸೈಬರ್‌ ಕ್ರೈಂ ಪೊಲೀಸ್‌ ತನಿಖಾ ತಂಡ ಕೇಳುತ್ತಿರುವ ಕಾರಣ, ಕೂಡಲೇ ವಿಶೇಷ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಕೋರಿ ಮಹಾಲೇಖಪಾಲಕರಿಗೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಕಾಲೇಜಿನ ಪ್ರಾಂಶುಪಾಲರು 2022ರ ಜುಲೈನಿಂದ 2023ರ ಜನವರಿವರೆಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಪ್ರತ್ಯುತ್ತರ ಬಂದಿಲ್ಲ.

‘ಕಾಲೇಜಿನ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದ ನಗದು ವಹಿ, ಡಿಸಿಬಿ ವಹಿ ಸೇರಿದಂತೆ ಇತರೆ ದಾಖಲಾತಿಗಳನ್ನು ಜಪ್ತಿ ಮಾಡುವುದಾಗಿ ಸೈಬರ್‌ ಕ್ರೈಂ ಪೊಲೀಸ್‌ ತನಿಖಾ ತಂಡ ತಿಳಿಸಿದೆ. ಇದಕ್ಕೆ ಇಲಾಖೆಯ ಜಂಟಿ ನಿರ್ದೇಶಕರು ಕಾಲಾವಕಾಶ ಕೇಳಿದ್ದಾರೆ. ಆದ್ದರಿಂದ ತುರ್ತಾಗಿ ಕಾಲೇಜಿನ ಲೆಕ್ಕ ತಪಾಸಣೆ ಮಾಡಿ ವರದಿ ನೀಡಿ’ ಎಂದು ಪ್ರಾಂಶುಪಾಲರು ಪತ್ರದಲ್ಲಿ ಮನವಿ ಮಾಡಿದ್ದಾರೆ.

***

ಕಾಲೇಜಿನಲ್ಲಿ ಲಭ್ಯವಿರುವ ಎಲ್ಲ ದಾಖಲೆಗಳನ್ನು ಪೊಲೀಸ್‌ ತನಿಖಾ ತಂಡಕ್ಕೆ ನೀಡಿದ್ದೇವೆ. ಆಡಿಟ್‌ ನಡೆಸಲು ಇಲಾಖೆಗೆ ಪತ್ರ ಬರೆಯಲಾಗಿದೆ.
– ಡಾ.ಜಗದೀಶ ಕೋರಿ, ಪ್ರಾಂಶುಪಾಲ, ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು


Spread the love

About Laxminews 24x7

Check Also

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

Spread the love ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ