Breaking News
Home / ಹುಬ್ಬಳ್ಳಿ / ಚಂದ್ರಶೇಖರ ಗುರೂಜಿ ಕಗ್ಗೊಲೆ: ಬಾಗಲಕೋಟೆ ಮೂಲದವರಾದ್ರೂ ಮುಂಬೈನಲ್ಲೇ ಇರುತ್ತಿದ್ದ ಇವರ ಹಿನ್ನೆಲೆ ಹೀಗಿದೆ.

ಚಂದ್ರಶೇಖರ ಗುರೂಜಿ ಕಗ್ಗೊಲೆ: ಬಾಗಲಕೋಟೆ ಮೂಲದವರಾದ್ರೂ ಮುಂಬೈನಲ್ಲೇ ಇರುತ್ತಿದ್ದ ಇವರ ಹಿನ್ನೆಲೆ ಹೀಗಿದೆ.

Spread the love

ಹುಬ್ಬಳ್ಳಿ: ನಗರದ ಹೋಟೆಲ್​ವೊಂದರಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನ ದುಷ್ಕರ್ಮಿಗಳಿಬ್ಬರು ಇಂದು ಮಧ್ಯಾಹ್ನ ಹಾಡಹಗಲೇ ಭೀಕರವಾಗಿ ಕೊಲೆ ಮಾಡಿದ್ದು, ಹುಬ್ಬಳ್ಳಿ ಜನತೆ ಬೆಚ್ಚಿಬಿದ್ದಿದ್ದಾರೆ. ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು.

ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಇದೀಗ ಇವರ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ.

ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆ ಮೂಲದವರು. ಇವರ ಮೊದಲ ಹೆಸರು ಚಂದ್ರಶೇಖರ ವಿರುಪಾಕ್ಷಪ್ಪ ಅಂಗಡಿ. ಬಾಗಲಕೋಟೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಇವರು ಬಾಗಲಕೋಟೆ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ವಿಭಾಗದಲ್ಲಿ ಪದವಿ ಪಡೆದರು. ಬಳಿಕ 1998ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿದ ಚಂದ್ರಶೇಖರ ಅವರು ವಾಸ್ತು ಶಾಸ್ತ್ರ ಕಲಿತರು. ವಾಪಸ್​ ಮುಂಬೈಗೆ ಆಗಮಿಸಿ ‘ಸರಳ ವಾಸ್ತು’ ಹೆಸರಿನಲ್ಲಿ ಕಚೇರಿ ಆರಂಭಿಸಿದ್ದರು.

ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು ಸಹೋದರರು, ಮೂವರು ಸಹೋದರರಿಯರು. ಮೊದಲ ಪತ್ನಿಯ ನಿಧನದ ಬಳಿಕ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದ ಅಂಕಿತಾ ಎಂಬುವರನ್ನ ಎರಡನೇ ಮದುವೆಯಾದರು. ಇವರಿಗೆ ಓರ್ವ ಪುತ್ರಿ ಇದ್ದಾಳೆ. ಅಂಕಿತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಗಲಕೋಟೆ ಬಿಟ್ಟು 30 ವರ್ಷ ಆಗಿತ್ತು. ಅಪರೂಪಕ್ಕೊಮ್ಮೆ ತವರು ಜಿಲ್ಲೆಗೆ ಬರುತ್ತಿದ್ದ ಚಂದ್ರಶೇಖರ ಗುರೂಜಿ, ಹೆಚ್ಚಾಗಿ ಮುಂಬೈನಲ್ಲೇ ನೆಲೆಸಿದ್ದರು. ಸಾವಿರಾರು ಕೋಟಿ ಆಸ್ತಿ ಒಡೆಯರಾಗಿದ್ದ ಚಂದ್ರಶೇಖರ ಗುರೂಜಿ, ನೂರಾರು ಜನರಿಗೆ ಉದ್ಯೋಗವನ್ನ ನೀಡಿದ್ದರು.

ಇತ್ತೀಚಿಗೆ ರಾಜ್ಯಕ್ಕೆ ಆಗಮಿಸಿದ್ದ ಚಂದ್ರಶೇಖರ ಗುರೂಜಿ ಅವರು 2 ದಿನದ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದರು. ನಾಲ್ಕು ದಿನದ ಮಟ್ಟಿಗೆ ಪ್ರೆಸಿಡೆಂಟ್​ ಹೋಟೆಲ್​ನಲ್ಲಿ 220ನೇ ನಂಬರ್​ನ ರೂಮ್​ ಪಡೆದಿದ್ದರು. ಬುಧವಾರ ರೂಮ್​ ಅನ್ನು ಚಕೌಟ್ ಮಾಡಬೇಕಿತ್ತು. ಅಷ್ಟರಲ್ಲಿ ಇಂದು ಮಧ್ಯಾಹ್ನ ಭಕ್ತರ ಸೋಗಲ್ಲಿ ಬಂದ ಯುವಕರಿಬ್ಬರು ಹೋಟೆಲ್​ನ ಸೆಪ್ಶನ್​ನಲ್ಲೇ ಗುರೂಜಿ ಅವರನ್ನ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಕೊಂದು ಪರಾರಿಯಾಗಿದ್ದಾರೆ.

ವಾಸ್ತುವಿನ ಸಂಶೋಧಕರಾಗಿದ್ದ ಡಾ.ಚಂದ್ರಶೇಖರ ಅಂಗಡಿ(ಗುರೂಜಿ) ಅವರು ಚಿಕ್ಕಂದಿನಲ್ಲೇ ಆಧ್ಯಾತ್ಮದತ್ತ ಆಸಕ್ತಿ ಹೊಂದಿದ್ದರು. 8 ವರ್ಷ ವಯಸ್ಸಿನಲ್ಲಿದ್ದಾಗಲೇ ತಮ್ಮೂರಿನ ಹಳೆಯ ದೇವಾಲಯವೊಂದರ ಜೀರ್ಣೋದ್ಧಾರಕ್ಕಾಗಿ ಜನರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿ ಮಾಡಿದ್ದರು. 14ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಬೇಕೆಂಬ ಬಯಕೆ ಅವರದ್ದಾಗಿತ್ತಾದರೂ ಅನಾರೋಗ್ಯ ಕಾರಣಕ್ಕೆ ಅದು ಸಾಕಾರಗೊಳ್ಳಲಿಲ್ಲ. ಸಿವಿಲ್ ಇಂಜಿನಿಯರ್​ ಪದವಿ ಪಡೆದ ಬಳಿಕ ಮುಂಬೈನಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಆರಂಭಿಸಿದ್ದರು. 1995 ರಲ್ಲಿ ‘ಶರಣ ಸಂಕುಲ ಟ್ರಸ್ಟ್’ ಆರಂಭಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದರು.

1998ರಲ್ಲಿ ಅವರಿಗೆ ಕನಸಿನಲ್ಲಿ ತಮ್ಮ ಮನೆಯ ಆಕಾರ ಕಾಣಿಸತೊಡಗಿತು ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗದ ಬಗ್ಗೆ ಆಲೋಚಿಸ ತೊಡಗಿದರು. ಪೂರ್ವಜರು ತಿಳಿವಳಿಕೆ ಹಾಗೂ ಸಂಪನ್ಮೂಲ ಕ್ರೂಡೀಕರಿಸಿ ಸುಂದರ ಕಲಾಕೃತಿಗಳನ್ನು, ಶಾಸ್ತ್ರಗಳನ್ನು ಹೇಗೆ ರೂಪಿಸಿದ್ದರು ಮತ್ತು ಇದು ದೈನಂದಿನ ಬದುಕಿನಲ್ಲಿ ಏಕೆ ಅಗತ್ಯ ಎಂಬುದರ ಬಗ್ಗೆ ತಿಳಿಯುತ್ತಾ ಹೋದರು. ನಂತರ ‘ಸರಳವಾಸ್ತು’ ಬಗ್ಗೆ ಸಂಶೋಧನೆ ಮಾಡುತ್ತಾ ಹೋದರು. ಜನರಿಗೆ ಸರಳ ವಾಸ್ತುವಿನ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ಚಂದ್ರಶೇಖರ ಗುರೂಜಿ ನಿರತವಾಗಿದ್ದರು. ಪ್ರತ್ಯೇಕ ವಾಹಿನಿ ತೆರೆದು ವಾಸ್ತು ಬಗ್ಗೆ ಮಾಹಿತಿ ನೀಡುತ್ತಿದ್ದರು. ಇವರ ಸಾವಿನ ಸುದ್ದಿ ಜನರಿಗೆ ಆಘಾತ ನೀಡಿದೆ.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ