Breaking News
Home / Uncategorized / ಸಂದಿಗ್ಧದಲ್ಲಿ ಕಾಂಗ್ರೆಸ್: ಕೈಪಡೆಗೆ ಬಿಸಿತುಪ್ಪವಾದ ಹೋರಾಟದ ಅಸ್ತ್ರ

ಸಂದಿಗ್ಧದಲ್ಲಿ ಕಾಂಗ್ರೆಸ್: ಕೈಪಡೆಗೆ ಬಿಸಿತುಪ್ಪವಾದ ಹೋರಾಟದ ಅಸ್ತ್ರ

Spread the love

ಬೆಳಗಾವಿ: ಭೂಹಗರಣದ ಅಸ್ತ್ರ ಪ್ರಯೋಗಿಸಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ರಾಜೀನಾಮೆ ಪಡೆದುಕೊಳ್ಳಲು ಅಣಿಯಾಗಿದ್ದ ಕಾಂಗ್ರೆಸ್​ಗೀಗ ಸಂದಿಗ್ಧ ಎದುರಾಗಿದೆ. ಸೋಮವಾರ ಆರಂಭವಾ ಗಲಿರುವ ಚಳಿಗಾಲದ ಅಧಿವೇಶನದ ಉತ್ತರಾರ್ಧದಲ್ಲಿ ಯಾವ ಅಸ್ತ್ರ ಹಿಡಿಯಬೇಕೆಂಬ ಚಿಂತೆ ಶುರುವಾಗಿದೆ.

ಈ ಸಂಬಂಧ ಸೋಮವಾರ ಬೆಳಗ್ಗೆ ಸುರ್ವಣಸೌಧದಲ್ಲಿ ಹಿರಿಯ ನಾಯಕರ ಸಭೆ ಕರೆಯಲಾಗಿದೆ.

ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆಂಬ ಕಾರಣಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರಕರಣ ಮುಂದಿಟ್ಟು ಕೊಂಡು ಧರಣಿ ನಡೆಸಿದ್ದ ಕಾಂಗ್ರೆಸ್, ರಾಜಿನಾಮೆಗೆ ಆಗ್ರಹಿಸಿತ್ತು. ಧರಣಿಯೊಂದಿಗೇ ಕಲಾಪ ಸೋಮವಾರಕ್ಕೆ ಮುಂದೂಡಲ್ಪಟ್ಟಿತ್ತು. ಬೈರತಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೊಷಿಸಿದ್ದರು, ಆದರೆ ಇದೀಗ ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಭಗ್ನ ಹಾಗೂ ಇತರ ಬೆಳವಣಿಗೆಗಳ ಕಾರಣದಿಂದಾಗಿ ಅವರು ತಮ್ಮ ಮಾತಿನಿಂದ ಹಿಂದೆ ಸರಿಯುವ ವಾತಾವರಣ ಸೃಷ್ಟಿಯಾಗಿದೆ. ಈ ದಿಢೀರ್ ಬೆಳವಣಿಗೆ ಸಚಿವ ಬೈರತಿಯವರಲ್ಲೂ ಕೊಂಚ ದುಗುಡ ತಣಿಸಿದೆ.

ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟ ಪ್ರಕರಣ, ಶಿವಾಜಿ ಪ್ರತಿಮೆಗೆ ಮಸಿ ಬಳಿದ ವಿಚಾರ ಹಾಗೂ ಬೆಳಗಾವಿಯಲ್ಲಿ ನಡೆದ ವಾಹನಗಳ ಮೇಲಿನ ಕಲ್ಲು ತೂರಾಟ, ಅದೆಲ್ಲಕ್ಕಿಂತ ಮುಖ್ಯವಾಗಿ ರಾಯಣ್ಣನ ಪ್ರತಿಮೆ ಹಾನಿ ಮಾಡಿದ ಪ್ರಕರಣ ಮುನ್ನೆಲೆಗೆ ಬಂದಿದೆ. ಆದರೆ ಶುಕ್ರವಾರ ಧರಣಿ ಆರಂಭವಾಗಿದ್ದರಿಂದ ಮುಂದೇನು ಎಂಬ ಬಗ್ಗೆ ರ್ಚಚಿಸಿ ತೀರ್ವನಿಸಲಿದ್ದಾರೆ.

ಬೈರತಿ ಪ್ರಕರಣದಿಂದ ಪಾರಾಗಲು ದಾರಿ ಹುಡುಕುತ್ತಿದ್ದ ಸರ್ಕಾರಕ್ಕೂ ಬೆಳವಣಿಗೆ ಕೊಂಚ ನಿರಾಳತೆ ತಂದಿದೆ. ರಾಯಣ್ಣ ಪ್ರತಿಮೆ ಭಗ್ನ ಪ್ರಕರಣ ಕುರಿತು ತನಿಖೆ ಚುರುಕುಗೊಳಿಸಿದ್ದು, ಸದನದಲ್ಲಿ ಪ್ರತಿಪಕ್ಷವನ್ನು ಸಮಾಧಾನಪಡಿಸಲು ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಸಿದ್ಧವಾಗಿದ್ದಾರೆ. ಸೋಮವಾರ ಬೆಳಗ್ಗೆ ಇಬ್ಬರೂ ಸಭೆ ನಡೆಸಲಿದ್ದಾರೆ. ಪರ್ಯಾಯವಾಗಿ ಕಾಂಗ್ರೆಸ್ ಕೂಡ ಈ ವಿಷಯವನ್ನು ಹೇಗಾದರೂ ಮಾಡಿ ಸೋಮವಾರವೇ ಮುಗಿಸಿ ಮಂಗಳವಾರ ಪುನಃ ಬೈರತಿ ಪ್ರಕರಣ ಕೈಗೆತ್ತಿಕೊಳ್ಳುವ ಆಲೋಚನೆಯಲ್ಲಿದೆ. ಈ ನಡುವೆ ಕನ್ನಡ ಸಂಘಟನೆಗಳು ಸೋಮವಾರ ದೊಡ್ಡ ಹೋರಾಟ ಸಂಘಟಿಸಿವೆ. ಸಂಗೊಳ್ಳಿ ರಾಯಣ್ಣ ಹಾಗೂ ಕನ್ನಡ ಧ್ವಜಕ್ಕೆ ಮಾಡಿದ ಅಪಮಾನಕ್ಕೆ ಪ್ರತಿಯಾಗಿ ಶಕ್ತಿ ಪ್ರದರ್ಶನ ನಡೆಸಲಿವೆ.

ಈ ವಾರದ ಪ್ರಮುಖ ಬೆಳವಣಿಗೆ

  1. ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿ ವಿಚಾರ ಪ್ರಸ್ತಾಪ, ಹೋರಾಟ
  2. ಮಧ್ಯಾಹ್ನ ಸಂಪುಟ ಸಭೆ, ಮತಾಂತರ ನಿಷೇಧ ಕಾಯ್ದೆಯನ್ನು ಶಾಸನಸಭೆಯಲ್ಲಿ ಮಂಡಿಸಲು ಅನುಮೋದನೆ ಪಡೆಯುವ ಸಾಧ್ಯತೆ
  3. ಮಂಗಳವಾರ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ, ಮುಂದಿನ ಹೋರಾಟದ ಬಗ್ಗೆ ಚರ್ಚೆ
  4. ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸಾಧ್ಯತೆ. ಪ್ರತಿಪಕ್ಷ ಎದುರಿಸಲು ಸಿಎಂ, ಮಾಜಿ ಸಿಎಂ ಮಾರ್ಗದರ್ಶನ
  5. ಕಲಾಪದಲ್ಲಿ 40 ಪರ್ಸೆಂಟೇಜ್ ವಿಷಯ ಕೈಗೆತ್ತಿಕೊಳ್ಳುವ ಸಾಧ್ಯತೆ ಅಥವಾ ಉತ್ತರ ಕರ್ನಾಟಕದ ಸಮಸ್ಯೆ ಅಭಿವೃದ್ಧಿ ಕುರಿತು ಚರ್ಚೆ
  6. ಬುಧವಾರ ಮಧ್ಯಾಹ್ನ ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಬಹುದೆಂಬ ಅಂದಾಜು.
  7. ಒಂದೊಮ್ಮೆ ಬೈರತಿ ಪ್ರಕರಣಕ್ಕೆ ಜೋತುಬಿದ್ದರೆ ಬೇರೆಯದೇ ಸಂದೇಶ ಹೋಗಲಿದೆ. ಅಷ್ಟೇ ಅಲ್ಲದೆ ಜೆಡಿಎಸ್ ಶಾಸಕರೂ ಕೂಡ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಷಯವನ್ನು ಕೈಬಿಡರು.

ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ?

ಬೆಳಗಾವಿ: ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಈವರೆಗೆ ವಾಕ್ಸಮರ, ಘೋಷಣೆ, ಪ್ರತಿಭಟನೆಗೆ ಸೀಮಿತವಾದ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಬಂಪರ್ ಕೊಡುಗೆ ನೀಡಲು ಸರ್ಕಾರ ಸಜ್ಜಾಗಿದೆ. ಸವಣೂರು, ಶಿಗ್ಗಾವಿ ಹಾಗೂ ಹಾನಗಲ್ ತಾಲೂಕುಗಳ 255 ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ 600 ಕೋಟಿ ರೂ ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಇದೂ ಸೇರಿದಂತೆ ತಲಾ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಪ್ರಾಂತಗಳಿಗೆ ಬಹು ಕೋಟಿ ರೂ. ಮೊತ್ತದ ಹೊಸ ಯೋಜನೆ ಪ್ರಕಟವಾಗುವ ಸಾಧ್ಯತೆ ಇದೆ. ಅಧಿವೇಶನದಲ್ಲಿ ಹಗರಣಗಳ ಪ್ರಸ್ತಾಪ, ಕಳಂಕ ಮೆತ್ತಲೆಂದು ಪ್ರತಿಪಕ್ಷಗಳು ಕಸರತ್ತು ನಡೆಸಿದ್ದರೆ, ಈ ಚರ್ಚೆಯ ದಿಕ್ಕು ಬದಲಿಸುವ ನಿಟ್ಟಿನಲ್ಲಿ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ಪ್ರಕಟಿಸಲು ಮುಂದಾಗಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಬಿಜೆಪಿಗೂ ಧರ್ಮಸಂಕಟ: ಮಹಾರಾಷ್ಟ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರ. ಹೀಗಾಗಿ ಅಲ್ಲಿನ ಸರ್ಕಾರವನ್ನು ನೇರವಾಗಿ ಪ್ರಸ್ತಾಪಿಸುವುದು ರಾಜ್ಯ ಕೈ ನಾಯಕರಿಗೆ ಕಷ್ಟವಾಗಲಿದೆ. ಹಾಗೆಯೇ ಬಿಜೆಪಿಗೂ ಎಂಇಎಸ್ ವಿರುದ್ಧ ಟೀಕಿಸಿ ಖಂಡಿಸಿದರೂ, ರಾಜಕೀಯ ಕಾರಣಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಸಲೀಸಲ್ಲ. ಏಕೆಂದರೆ ಒಂದು ನಿರ್ದಿಷ್ಟ ಸಮುದಾಯ ಎದುರು ಹಾಕಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಬೆಳಗಾವಿಯಲ್ಲಿ ಪಾಲಿಕೆಗೆ ಗೆದ್ದಿರುವ ಬಿಜೆಪಿಯಲ್ಲಿ ಮರಾಠಿಗರು ಹದಿನಾರು ಜನರಿದ್ದಾರೆ. ಇನ್ನು ಎಂಇಎಸ್ ಹೆಸರೆತ್ತಿ ಟೀಕಿಸಲು ಬೆಳಗಾವಿಯ ಬಹುತೇಕ ಶಾಸಕರು ಸಿದ್ಧರಿಲ್ಲ. ಚುನಾವಣೆ ಭವಿಷ್ಯ ಗಮನದಲ್ಲಿಟ್ಟುಕೊಂಡು ಎಚ್ಚರಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ಕಲಾಪದಲ್ಲಿ ಅವರ ನೈಜ ನಡವಳಿಕೆ ಎದ್ದು ತೋರಲಿದೆ.


Spread the love

About Laxminews 24x7

Check Also

ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

Spread the love ಬೆಂಗಳೂರು: ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಾಗಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವಾಹನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ