Home / ಜಿಲ್ಲೆ / ಬೆಳಗಾವಿ / ಡಿಸೆಂಬರ್ 13ರಿಂದ 23ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆ: ಬಸವರಾಜ ಹೊರಟ್ಟಿ

ಡಿಸೆಂಬರ್ 13ರಿಂದ 23ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆ: ಬಸವರಾಜ ಹೊರಟ್ಟಿ

Spread the love

ಬೆಳಗಾವಿ – ಡಿಸೆಂಬರ್ 13ರಿಂದ 23ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆ ಎನ್ನುವ ಸುಳಿವನ್ನು ವಿಧಾನಪರಿಷತ್ತಿನ ಸಭಾಪತಿ  ಬಸವರಾಜ ಹೊರಟ್ಟಿ ನೀಡಿದ್ದಾರೆ.

ಸುವರ್ಣವಿಧಾನಸೌಧದಲ್ಲಿ ಸಿದ್ಧತೆಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.  ವಿಧಾನಮಂಡಳ ಚಳಿಗಾಲದ ಅಧಿವೇಶನ 2018 ರ ನಂತರ ಬೆಳಗಾವಿಯಲ್ಲಿ ನಡೆದಿರಲಿಲ್ಲ. ಈ ಬಾರಿ ವಿಧಾನಮಂಡಳದ ಕಲಾಪಗಳ ನೇರಪ್ರಸಾರ ವ್ಯವಸ್ಥೆ ಮಾಡಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪೂರ್ವಸಿದ್ಧತೆ ಸಭೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಹೊರಟ್ಟಿ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು –

* ಇ-ಗವರ್ನನ್ಸ್, ಲೋಕೋಪಯೋಗಿ, ವಾರ್ತಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

* ಈ ಬಾರಿ ಅಧಿವೇಶನದ ಕಲಾಪವನ್ನು ನೇರಪ್ರಸಾರ ಮಾಡಲು ನಿರ್ಧರಿಸಲಾಗಿದೆ.

ನ.20 ರೊಳಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

* ಅಧಿವೇಶನ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ ಮಾಹೆಯಲ್ಲಿ ಅಧಿವೇಶನ ನಡೆಯುವುದು ಖಚಿತವಾಗಿದೆ. ದಿನಾಂಕವನ್ನು ಸರಕಾರ ನಿರ್ಧರಿಸಲಿದೆ.

* ಶಾಸಕರ ಭವನ ನಿರ್ಮಾಣ ಬಹುಜನರ ಬೇಡಿಕೆಯಾಗಿದೆ. ಇದನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು.

* ಶಾಸಕರ ಭವನದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಧಕ-ಬಾಧಕಗಳನ್ನು ಚರ್ಚಿಸಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.

* ಸುವರ್ಣ ವಿಧಾನಸೌಧವನ್ನು ನಿರ್ಮಿಸಿ ಪ್ರತಿವರ್ಷ ಅಧಿವೇಶನ ನಡೆಸುವುದರಿಂದ ಶಾಸಕರ ಭವನ ನಿರ್ಮಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ.

* ಅಧಿವೇಶನ ನಡೆಸುವಾಗ ಕಚೇರಿಗಳ ಕೆಲಸಕಾರ್ಯಗಳು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರಿಶೀಲಿಸಲಾಗುತ್ತಿದೆ.

* ಸುವರ್ಣ ವಿಧಾನಸೌಧಕ್ಕೆ ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

* ಅಧಿವೇಶನದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಜಿಸಲಾಗುವುದು.

* ಶಾಸಕರ ಹಾಜರಾತಿ ಕಡ್ಡಾಯಗೊಳಿಸಲು ಅವಕಾಶಗಳಿರುವುದಿಲ್ಲ. ಆದರೆ ಬೆಳಗಾವಿ ಅಧಿವೇಶನದ ಕಲಾಪಗಳಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

* ಪ್ರಶ್ನೋತ್ತರ, ಶೂನ್ಯ ವೇಳೆ, ಗಮನಸೆಳೆಯುವ ಸೂಚನೆ ಸೇರಿದಂತೆ ತುರ್ತು ವಿಷಯಗಳ ಚರ್ಚೆಗೆ ನಿಯಮಾವಳಿ ಪ್ರಕಾರ ಅವಕಾಶವನ್ನು ಕಲ್ಪಿಸಲಾಗುವುದು. ಆಯಾ ದಿನದ ವಿಷಯಸೂಚಿಯ ಪ್ರಕಾರ ಕಲಾಪವನ್ನು ನಡೆಸಲಾಗುವುದು.

* ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ವಿಧಾನಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

 

ವೆಬ್ ಕ್ಯಾಸ್ಟಿಂಗ್ ಕುರಿತು ಸಭೆ; ಪೂರ್ವಸಿದ್ಧತೆ ಪರಿಶೀಲನೆ

ಬೆಳಗಾವಿ ಚಳಿಗಾಲ ಅಧಿವೇಶನ ಕಲಾಪ ನೇರಪ್ರಸಾರ: ಸಭಾಪತಿ ಬಸವರಾಜ ಹೊರಟ್ಟಿ

 

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ಕಲಾಪವನ್ನು ಸಾರ್ವಜನಿಕರೂ ವೀಕ್ಷಿಸಲು ಅನುಕೂಲವಾಗುವಂತೆ ಮೊದಲ ಬಾರಿ ವೆಬ್ ಕ್ಯಾಸ್ಟಿಂಗ್ ಮೂಲಕ ನೇರಪ್ರಸಾರ‌ ವ್ಯವಸ್ಥೆ ಮಾಡಲಾಗುವುದು ಎಂದು ವಿಧಾನಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ ತಿಳಿಸಿದರು.

ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ನೇರಪ್ರಸಾರ ಮಾಡುವ ಕುರಿತು ಸೋಮವಾರ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ವೆಬ್ ಕ್ಯಾಸ್ಟಿಂಗ್ ಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಯೊಂದು ಇಲಾಖೆಯ ಕಚೇರಿಯಲ್ಲಿ ಇ-ಆಫೀಸ್ ಬಳಕೆ ಮಾಡುತ್ತಿರುವುದರಿಂದ ಇಂಟರ್ನೆಟ್ ಸೇರಿದಂತೆ ಎಲ್ಲ ಸಮರ್ಪಕ ಸೌಲಭ್ಯಗಳನ್ನು ಒಂದು ವಾರದೊಳಗೆ ಒದಗಿಸುವಂತೆ ತಿಳಿಸಿದರು.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡಲು ವ್ಯವಸ್ಥೆ ಕಲ್ಪಿಸಬೇಕು.
ಸಾರ್ವಜನಿಕರು ವಿಧಾನಮಂಡಲ ಅಧಿವೇಶನದ ಕಲಾಪವನ್ನು ನೇರವಾಗಿ ವೀಕ್ಷಿಸಲು ಅನುಕೂಲ ಕಲ್ಪಿಸಲು ಏನೆಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಅವೆಲ್ಲವನ್ನೂ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಕ ನೀಡಿದರು.
ಅಧಿವೇಶನ ಎಲ್ಲ ರೀತಿಯಿಂದ ಸುಗಮವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕೆಲಸಕಾರ್ಯಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದರು.

ಇದಕ್ಕೂ ಮುಂಚೆ ಪರಿಷತ್ತಿನ ಸಭಾಂಗಣವನ್ನು ಪರಿಶೀಲಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಬೆಳಗಾವಿಯಲ್ಲಿ ಮೊದಲ ಅಧಿವೇಶನ ಆರಂಭಗೊಂಡ ಹಿನ್ನೆಲೆಯನ್ನು ವಿವರಿಸಿದರು.

ವಿಧಾನ ಮಂಡಳದ ಕಲಾಪವನ್ನು ನೇರಪ್ರಸಾರ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರತಿಯೊಂದು ವಿಷಯವನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಅದೇ ರೀತಿ ಡಿಸೆಂಬರ್ ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕೂಡ ಇದೇ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಭಾಪತಿ ತಿಳಿಸಿದರು.

ಅಧಿವೇಶನದ ಸಿದ್ಧತೆ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಂಜೀವಕುಮಾರ್ ಹುಲಕಾಯಿ, ಎನ್.ಐ.ಸಿ. ಅಧಿಕಾರಿ ಸಂಜೀವಕುಮಾರ್ ಕ್ಷೀರಸಾಗರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ಇ-ಗವರ್ನನ್ಸ್, ಎನ್.ಐ.ಸಿ., ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ