Breaking News
Home / ಜಿಲ್ಲೆ / ಬೆಂಗಳೂರು / ಬಿಜೆಪಿ ಭಿನ್ನಮತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ

ಬಿಜೆಪಿ ಭಿನ್ನಮತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ

Spread the love

ಬೆಂಗಳೂರು,ಆ.9- ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಸಂಪುಟ ವಿಸ್ತರಣೆಯಾಗಿ ಖಾತೆಗಳು ಹಂಚಿಕೆಯಾಗಿದ್ದರೂ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ನಿರೀಕ್ಷಿತ ಖಾತೆ ಸಿಗದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರನ್ನು ಸಂಬಾಳಿಸುವುದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.

ಅಸಮಾಧಾನಗೊಂಡಿರುವ ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್, ವಿ.ಸೋಮಣ್ಣ, ಶ್ರೀರಾಮುಲು ಮತ್ತಿತರರು ಎಲ್ಲವೂ ಸರಿ ಹೋಗಿದೆ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದಾರಾದರೂ ಒಳಗೊಳಗೆ ಕುದಿಯುತ್ತಿದ್ದಾರೆ. ನಾವು ಕೇಳಿದ ಖಾತೆಗಳನ್ನು ನೀಡದಿರುವಾಗ ಹೇಗೆ ಸಂಪುಟದಲ್ಲಿ ಮುಂದುವರೆಯಬೇಕು ಎಂಬುದು ಕೆಲವರ ವರಸೆಯಾದರೆ ಸಚಿವ ಸ್ಥಾನ ಸಿಗದೆ ಬುಸುಗುಡುತ್ತಿರುವ ಸಿ.ಪಿ.ಯೋಗೇಶ್ವರ್ , ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ್, ರಾಜುಗೌಡ ನಾಯಕ್ ಸೇರಿದಂತೆ ಅನೇಕರು ಸರ್ಕಾರದ ವಿರುದ್ಧ ತಿರುಗಿ ಬೀಳಲು ಸಜ್ಜಾಗಿದ್ದಾರೆ.

ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಅವರು ಖಾತೆ ವಿಚಾರವಾಗಿ ಸುಮಾರು 25ರಿಂದ 30 ನಿಮಿಷ ಚರ್ಚೆ ನಡೆಸಿದ್ದಾರೆ. ಅಸಮಾಧಾನಿತ ಶಾಸಕರ ಮನವೊಲಿಸುವ ಕಾರ್ಯ ಹಾಗೂ ಕೋವಿಡ್- ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸಂಬಂಧ ಯಡಿಯೂರಪ್ಪನವರು ಬೊಮ್ಮಾಯಿ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಶಶಿಕಲಾ ಜೊಲ್ಲೆ ಮತ್ತು ವಿ. ಸೋಮಣ್ಣ ಅವರು ಖಾತೆ ವಿಚಾರದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಇಂಧನ ಖಾತೆಯ ಮೇಲೆ ಆನಂದ್ ಸಿಂಗ್ ಕಣ್ಣಿಟ್ಟರೆ, ವಸತಿ ಖಾತೆಯ ಮೇಲೆ ಎಂಟಿಬಿ ನಾಗರಾಜ್ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿರುವ ಶ್ರೀಮಂತ್ ಪಾಟೀಲ್, ಮಹೇಶ್ ಕುಮಟಳ್ಳಿ ಮತ್ತು ಪ್ರತಾಪ್ ಗೌಡ ಪಾಟೀಲ್ ಕೂಡ ಸಭೆ ನಡೆಸಿದ್ದಾರೆ.

ಇದಲ್ಲದೇ ಶುಕ್ರವಾರ ಸಂಜೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಹಲವು ಶಾಸಕರು ಸಭೆ ನಡೆಸಿರುವುದು ಸಿಎಂಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸಿಡಿ ಪ್ರಕರಣದಲ್ಲಿ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರು, ತನಿಖೆ ನಂತರ ಕ್ಲೀನ್‍ಚಿಟ್ ದೊರೆತ ಮೇಲೆ ತಮ್ಮನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಸುರಪುರ ಶಾಸಕ ರಾಜು ಗೌಡ ಮತ್ತು ಹಾವೇರಿಯ ನೆಹರು ಓಲೇಕಾರ್ ಸೇರಿದಂತೆ ಅಸಮಾಧಾನಿತ ಶಾಸಕರ ಪಟ್ಟಿ ಬೆಳೆಯುತ್ತಲೇ ಇದೆ. ಇದಲ್ಲದೇ ಅಸಮಾಧಾನಿತ ಶಾಸಕರ ಜೊತೆ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಯೋಗೇಶ್ವರ್ ಮತ್ತು ಎಚ್.ವಿಶ್ವನಾಥ್ ಸಂಪರ್ಕದಲ್ಲಿರುವುದು ಸಿಎಂಗೆ ಮತ್ತೊಂದು ಸಮಸ್ಯೆಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸೋತ ಪ್ರತಾಪ್ ಗೌಡ ಪಾಟೀಲ್ ಶನಿವಾರ ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಮತ್ತು ಮಹೇಶ್ ಕುಮಟಹಳ್ಳಿ ಅವರೊಂದಿಗೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದಾಗಿ ತಿಳಿದುಬಂದಿದೆ. ತಾವು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಪಕ್ಷ ತಮ್ಮನ್ನು ಗುರುತಿಸಿಲ್ಲ, ಕೆಲವು ಜನರು ನನ್ನನ್ನು ಸೋಲಿಸಲು ಪಿತೂರಿ ಮಾಡಿದ್ದರು, ಹೀಗಾಗಿ ನನಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಕೇಳುತ್ತಿದ್ದಾರೆ. ಪ್ರತಿಯೊಬ್ಬರನ್ನೂ ಶೇಕಡ ನೂರರಷ್ಟು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.

ನನ್ನ ಹೆಸರನ್ನು ಸಹ ಮಂತ್ರಿ ಸ್ಥಾನಕ್ಕಾಗಿ ಪರಿಗಣಿಸಲಾಗಿತ್ತು, ಆದರೆ ಎಲ್ಲರಿಗೂ ಒಂದೇ ಸಮಯದಲ್ಲಿ ಅವಕಾಶ ನೀಡಲಾಗುವುದಿಲ್ಲ, ನಾವು ನಮ್ಮ ಸರದಿಗಾಗಿ ಕಾಯಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಸದ್ಯ ಎದ್ದಿರುವ ಅಸಮಾಧಾನವನ್ನು ಹೇಗೆ ಬಗೆಹರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ