ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಅದ್ಧೂರಿ ರಥೋತ್ಸವ ನಡೆಸದೇ ಇರಲು ದೇವಸ್ಥಾನ ತೀರ್ಮಾನಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರುವುದರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಸಭೆ ಮಾಡಿ ಜಿಲ್ಲಾಧಿಕಾರಿ ಜಗದೀಶ್ ಅವರ ಸೂಚನೆಗೆ ಒಪ್ಪಿದೆ. ಅದ್ಧೂರಿ ರಥೋತ್ಸವ ಬದಲು ದೇವರ ರಥಾರೋಹಣ ಮಾತ್ರ ಮಾಡಲು ನಿಶ್ಚಯಿಸಿದೆ. ರಥಾರೋಹಣ ವೇಳೆ ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರು ಮಾತ್ರ ಪಾಲ್ಗೊಳ್ಳುವಂತೆ ವಿನಂತಿ ಮಾಡಿಕೊಂಡಿದೆ.
ಭಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಸಮಸ್ಯೆಗಳು, ಕಂಟಕಗಳ ನಿವಾರಣೆಯಾದ ಮೇಲೆ ದೇವಸ್ಥಾನದಲ್ಲಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಪಬ್ಲಿಕ್ ಟಿವಿ ಮೂಲಕ ವಿನಂತಿ ಮಾಡಿದ್ದಾರೆ.