ರಾಯಚೂರು: ರಾಯರ ಸನ್ನಿಧಿ ಮಂತ್ರಾಲಯದಲ್ಲಿ ನವರಸನಾಯಕ ಜಗ್ಗೇಶ್ ಇಂದು ತಮ್ಮ 57ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಪ್ರತಿ ವರ್ಷದಂತೆ ಹುಟ್ಟುಹಬ್ಬದ ದಿನ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಜಗ್ಗೇಶ್ ಕೊರೊನಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕೊರೊನಾ ಇದು ಮಾನವ ನಿರ್ಮಿತ ವೈರಾಣು. ಅಮೆರಿಕ, ರಷ್ಯಾ ಹಾಗೂ ಚೀನಾ ನಂಬರ್ ಒನ್ ಸ್ಥಾನಕ್ಕಾಗಿ ನಡೆದಿರುವ ಬಯೋಲಾಜಿಕಲ್ ವಾರ್ ಇದು. ಪ್ರಕೃತಿ ಆಗಾಗ ಇಂತಹ ರೋಗಗಳಿಂದ ಮಾನವನಿಗೆ ಎಚ್ಚರಿಸುತ್ತಿದೆ. ಈ ಹಿಂದಿನ ಶತಮಾನದಲ್ಲಿ ಪ್ಲೇಗ್ ಬಂದಿತ್ತು. ಈಗ ಕೊರೊನಾ ಬಂದಿದೆ. ಕೊರೊನಾ ಬಗ್ಗೆ ಭಯಬೇಡ ಜಾಗೃತಿಯಿಂದ ಇರಿ ಎಂದು ಹೇಳಿದರು.
ಇದೇ ವೇಳೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶುಭಾಶಯ ಕೋರಿದರು. ಈ ನಾಡಿನ ಹೆಸರಾಂತ ನಟ, ಹಿರಿಯರ ಮಗ, ರಾಯರು ಪುನೀತ್‍ಗೆ ಆಯು, ಆರೋಗ್ಯ, ಭಾಗ್ಯ ನೀಡಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಹೋರಾಟಗಾರ ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಜಗ್ಗೇಶ್ ಸಂತಾಪ ಸೂಚಿಸಿದರು. 102 ವರ್ಷ ಈ ನಾಡು ನುಡಿಗಾಗಿ ಹೋರಾಟ ಮಾಡಿದ ಜೀವ ಅದು. ಅವರು ವಿಶ್ವೇಶ್ವರಯ್ಯನಂತೆ ಈ ನಾಡಿಗೆ ಶ್ರಮಿಸಿದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.