ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರನ್ನು ಇಡುವಂತೆ ರಾಜ್ಯ ಸಕಾ೯ರ ಮಾಡಿದ್ದ ಶಿಫಾರಸ್ಸನ್ನು ವಷ೯ದ ಹಿಂದೆಯೇ ತಿರಸ್ಕರಿಸಿರುವ ಕೇಂದ್ರ ಸಕಾ೯ರ, ಈಗ ಹೊಸದಾಗಿ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ಸೂಚಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಕೇಂದ್ರದ ನಿಲುವಿನ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಿತ್ತೂರು ಚನ್ನಮ್ಮ ಐತಿಹಾಸಿಕ ವ್ಯಕ್ತಿ ಅಲ್ಲವೇ ಎಂದು ಚನ್ನಮ್ಮನ ಅನುಯಾಯಿಗಳು ಪ್ರಶ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ಸಕಾ೯ರ ಇದ್ದಾಗ, ವಿಮಾನ ನಿಲ್ದಾಣಕ್ಕೆ ಚೆನ್ನಮ್ಮನ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಬಿಜೆಪಿಯ ಅನೇಕ ನಾಯಕರು ಒತ್ತಾಯಿಸಿದ್ದರು. ಕೇಂದ್ರದಲ್ಲಿ ಮೋದಿ ನೇತೃತ್ವದ ನಮ್ಮದೇ ಸಕಾ೯ರವಿದೆ. ನೀವು ಶಿಫಾರಸು ಮಾಡಿದರೆ ಸಾಕು ಮುಂದಿನ ಕೆಲಸವನ್ನು ನಾವೇ ಮಾಡುತ್ತೇವೆ ಎಂದು ಗವ೯ದಿಂದ ಹೇಳಿಕೊಂಡಿದ್ದರು. ಆದಷ್ಟು ಬೇಗ ಕಳಿಸಿಕೊಟ್ಟರೆ ಒಳ್ಳೆಯದು ಎಂದೂ ಒತ್ತಡ ಹಾಕಿದ್ದರು. ಹಲವಾರು ಸಂಘಟನೆಗಳೂ ಕೂಡ ಸಕಾ೯ರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಇದರ ಪರಿಣಾಮ ಸಿದ್ಧರಾಮಯ್ಯ ಅವರು ರಾಣಿ ಚೆನ್ನಮ್ಮನ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.
ಡಿಸೆಂಬರ್ ೨೦೧೮ರಲ್ಲಿ ಕೇಂದ್ರ ಸಕಾ೯ರ ರಾಜ್ಯದ ಶಿಫಾರಸನ್ನು ಸಾರಾಸಗಟಾಗಿ ತಿರಸ್ಕರಿಸಿತು. ಶಿಫಾರಸನ್ನು ತಿರಸ್ಕರಿಸಿದರೂ, ಹಿಂದೆ ದೊಡ್ಡ ದೊಡ್ಡ ಮಾತುಗಳನ್ನು ಆಡಿದ್ದ ಬಿಜೆಪಿಯ ನಾಯಕರಾರೂ ಮಾತನಾಡಲಿಲ್ಲ. ತುಟಿ ಪಿಟಿಕ್ ಎನ್ನಲಿಲ್ಲ. ದೆಹಲಿಗೆ ಹೋಗಿ ಸಂಬಂಧಪಟ್ಟ ಸಚಿವರ ಮನವೊಲಿಸುತ್ತೇವೆ ಎನ್ನಲಿಲ್ಲ. ಈಗ ಕೇಂದ್ರದಿಂದ ಪತ್ರ ಬಂದಿದ್ದು, ವಿಮಾನ ನಿಲ್ದಾಣಕ್ಕೆ ಹೆಸರಿಡಲು ಸ್ಥಳೀಯ ಐತಿಹಾಸಿಕ ವ್ಯಕ್ತಿಗಳ ಹೆಸರುಗಳನ್ನು ಸೂಚಿಸುವಂತೆ ಕೋರಲಾಗಿದೆ. ಪತ್ರದಿಂದ ಗೊಂದಲ ಮೂಡಿದ್ದು, ಈಗಾಗಲೇ ತಿರಸ್ಕೃತಗೊಂಡಿರುವ ರಾಣಿ ಚೆನ್ನಮ್ಮನ ಹೆಸರನ್ನು ಸೇರಿಸಿಯೇ ಮತ್ತೊಂದು ಪಟ್ಟಿಯನ್ನು ಕೇಂದ್ರ ಕಳಿಸಬೇಕೋ ಅಥವಾ ಚೆನ್ನಮ್ಮನ ಹೆಸರನ್ನು ಬಿಟ್ಟು ಕಳಿಸಬೇಕೋ ಎನ್ನುವುದು ತಿಳಿಯದಾಗಿದೆ.
ಐತಿಹಾಸಿಕ ವ್ಯಕ್ತಿಗಳ ಹೆಸರನ್ನೇ ಕೇಂದ್ರ ಸಕಾ೯ರ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದಿದ್ದರೆ, ಚೆನ್ನಮ್ಮನ ಹೆಸರನ್ನು ತಿರಸ್ಕರಿಸಿದ್ದೇಕೆ ಎನ್ನುವ ಪ್ರಶ್ನೆ ಎದ್ದಿದೆ. ಆಗ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಕಾ೯ರ ಶಿಫಾರಸು ಮಾಡಿದ್ದ ಕಾರಣ ಕೇಂದ್ರವು, ಕಾಂಗ್ರೆಸ್ ಸಕಾ೯ರಕ್ಕೆ ಇದರ ಕ್ರೆಡಿಟ್ ಹೋಗಬಾರದೆಂದು ಚನ್ನಮ್ಮನ ಹೆಸರನ್ನು ತಿರಸ್ಕರಿಸಿತ್ತಾ? ಚನ್ನಮ್ಮನ ಹೆಸರಿನಲ್ಲಿ ಕೇಂದ್ರದಿಂದ ಕೊಳಕು ರಾಜಕಾರಣ ಮಾಡಲಾಗುತ್ತಿದೆಯಾ? ಎನ್ನುವ ಅನುಮಾನಗಳು ಮೂಡತೊಡಗಿವೆ. ನಿಲ್ದಾಣಕ್ಕೆ ಐತಿಹಾಸಿಕ ವ್ಯಕ್ತಿಗಳ ಹೆಸರನ್ನೇ ಇಡುವುದಿದ್ದರೆ, ಯಾವ ಕಾರಣಗಳಿಗಾಗಿ ಚನ್ನಮ್ಮನ ಹೆಸರನ್ನು ತಿರಸ್ಕರಿಸಲಾಯಿತು, ಎನ್ನುವ ಪ್ರಶ್ನೆಗಳಿಗೆ ಬಿಜೆಪಿ ನಾಯಕರ ಬಳಿಯಾಗಲೀ, ಕೇಂದ್ರ ಸಕಾ೯ರದ ಬಳಿಯಾಗಲೀ ಉತ್ತರವಿಲ್ಲ. ಏಕೆಂದರೆ, ಇದು ಶುದ್ಧ ಡಟಿ೯ ಪಾಲಿಟಿಕ್ಸ್.