ಬೆಂಗಳೂರು,ಜ.29- ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಕ್ಕೆ ಸಿಲುಕಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿಗೆ ಸಂಕಷ್ಟ ಎದುರಾಗಿದೆ. ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಐಎಂಎ ಪ್ರಕರಣದಲ್ಲಿ ಆರೋಪಿ ಮನ್ಸೂರ್‍ಖಾನ್‍ಗೆ ಸಹಾಯ ಮಾಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಬಿಐ, ಇಬ್ಬರು ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಐಎಂಎ ಪ್ರಕರಣದ ಸಕ್ಷಮ ಪ್ರಾಧಿಕಾರಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದೀಗ ತನಿಖೆ ನಡೆಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ ಉನ್ನತ ಮೂಲಗಳು ತಿಳಿಸಿವೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖಾ ತಂಡ ಆಡಳಿತ ವಿಭಾಗದ ಡಿಸಿಪಿ ಹೇಮಂತ್ ನಿಂಬಾಳ್ಕರ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ, ಶ್ರೀ ಧರ್, ಇನ್ಸ್‍ಪೆಕ್ಟರ್ ಎಂ.ರಮೇಶ್, ಸಬ್ ಇನ್ಸ್‍ಪೆಕ್ಟರ್ ಗೌರಿಶಂಕರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಕೆಲ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿತ್ತು.
ಕೆಲ ದಿನಗಳ ಹಿಂದಷ್ಟೇ, ಹೇಮಂತ್ ನಿಂಬಾಳ್ಕರ್ ಅವರನ್ನು ಸಿಬಿಐ ಅಧಿಕಾರಿಗಳು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಅವರು, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿದ್ದಾಗ ವಂಚನೆ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್‍ನಿಂದ ಹಣ ಪಡೆದ ಆರೋಪ ಕೇಳಿಬಂದಿತ್ತು. ಇನ್ನೋರ್ವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರ ಮೇಲೂ ಹಣ ಪಡೆದಿರುವ ಆರೋಪ ಇದ್ದು, ಇವರನ್ನು ಸಹ ಸಿಬಿಐ ವಿಚಾರಣೆ ನಡೆಸಿತ್ತು.
ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿರುವುದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿತ್ತು. ಇದೀಗ ಇವರಿಬ್ಬರ ಮೇಲೂ ತನಿಖೆ ನಡೆಸಲು ಅಸ್ತು ಎಂದಿರುವುದರಿಂದ ಈ ಅಧಿಕಾರಿಗಳು ಕಾನೂನಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.