ಹಾಸನ: ಕೊರೊನಾದಿಂದ ಅಲ್ಲ ಊಟ ತಿಂಡಿ ಇಲ್ಲದೆ ಸಾಯೋ ಪರಿಸ್ಥಿತಿ ಬರುತ್ತೆ. ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಸಿಎಂ ಯಡಿಯೂರಪ್ಪ ಒಬ್ಬನೇ ಒಬ್ಬ ಗುತ್ತಿಗೆದಾರನಿಗೆ 1,200 ಕೋಟಿ ಹಣ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ 69 ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಅದರಲ್ಲಿ 40 ಲಕ್ಷ ಲೀಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ. ಉಳಿದ 29 ಲಕ್ಷ ಲೀಟರ್ ಹಾಲನ್ನು ಕನ್ವರ್ಷನ್ ಮಾಡಬೇಕಿದೆ. ಆದರೆ ನಮ್ಮಲ್ಲಿ 10 ರಿಂದ 12 ಲಕ್ಷ ಕನ್ವರ್ಷನ್ ಕೆಪಾಸಿಟಿ ಇದೆ ಎಂದರು.
ಕೆಎಂಎಫ್ ಆಯಾ ಒಕ್ಕೂಟಗಳೇ ರಜಾನಾದರೂ ಕೊಡಿ. ಇಲ್ಲ ಹಾಲನ್ನು ಏನಾದರೂ ಮಾಡಿಕೊಳ್ಳಿ. ಆದರೆ ಪ್ರತಿ ಮೂರು ದಿನಕ್ಕೊಮ್ಮೆ ಹಾಲು ಕೊಳ್ಳುವುದು ನಿಲ್ಲಿಸಿ ಎಂದು ಸೂಚಿಸಿದೆ. ಒಕ್ಕೂಟಗಳೇ ಏನಾದರೂ ಮಾಡಿಕೊಳ್ಳಿ ಅಂದರೆ ಕೆಎಂಎಫ್ ಯಾಕೆ ಬೇಕು. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ರೇವಣ್ಣ ಅಸಮಾಧಾನ ಹೊರಹಾಕಿದರು.ದೇಶದಲ್ಲಿ ಯಾವ ಪರಿಸ್ಥಿತಿ ಇದೆ ಗೊತ್ತಿಲ್ಲ. ನಮ್ಮನ್ನು ದೇವರೇ ಕಾಪಾಡಬೇಕು. ವಾರಕ್ಕೆ ಕನಿಷ್ಟ 5 ಜನ ಸಾಯುತ್ತಿದ್ದಾರೆ. ನಾನೇ ಒಂದು ವಾರದಿಂದ 20 ಮನೆಗಳಿಗೆ ಸಾವಿಗೆ ಹೋಗಿ ಬಂದಿದ್ದೇನೆ. ಆಸ್ಪತ್ರೆಗೆ ತೋರಿಸಲು ಹಣ ಇಲ್ಲದೆ ಅವರೆಲ್ಲ ಅನಾರೋಗ್ಯದಿಂದ ಸಾಯುತ್ತಿದ್ದಾರೆ ಎಂದು ಆತಂಕ ಹೊರಹಾಕಿದರು.