; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದ ವತಿಯಿಂದ ಇಂದು ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ.
ಮಾಸ್ಕ್ ಡೇ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕೋವಿಡ್ ತಡೆಯಲು ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಬೇಕು. ಇದನ್ನು ಪ್ರತಿ ಜಿಲ್ಲೆ, ತಾಲ್ಲೂಕಿನ ಕೇಂದ್ರಗಳಲ್ಲೂ ಆಚರಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಅವಶ್ಯ. ಸೋಪಿನಿಂದ ಕೈ ತೊಳೆದುಕೊಳ್ಳುವುದು, ಸ್ಯಾನಿಟೇಜರ್ ಬಳಸುವಂತದ್ದು ಪ್ರಮುಖ ಅಂಶ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತದ್ದು ಸಹ ಮುಖ್ಯ. ಈ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇದಕ್ಕೆ ಸರ್ಕಾರದ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ಮಾಸ್ಕ್ ಧರಿಸುವುದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದು ಇತರರ ರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.
ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ. ಪ್ರಧಾನಿಗಳು ರಾಜ್ಯ ಸರ್ಕಾರದ ಬಿಗಿ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ . ಅಗತ್ಯ ವೈದ್ಯಕೀಯ ಸಾಮಾಗ್ರಿಗಳನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿದೆ. ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರು, ಕೊರೋನಾ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಕಾರ್ಯಕ್ಕೆ ಧನ್ಯವಾದಗಳು ಎಂದು ಹೇಳಿದರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಕಂದಾಯ ಸಚಿವ ಆರ್ ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್, ಸುರೇಶ್ ಕುಮಾರ್ ಶಿಕ್ಷಣ ಸಚಿವರು, ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಬೆಂಗಳೂರು ಮಹಾನಗರದ ಮಹಾಪೌರರು , ಉಪ ಮಹಾಪೌರರು, ಹಾಗೂ ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.