Breaking News
Home / ಜಿಲ್ಲೆ / ಕೇಂದ್ರದಿಂದ ಹೆಚ್ಚುವರಿ ಆಕ್ಸಿಜನ್; ಶೀಘ್ರ ಸಮಸ್ಯೆಗೆ ಪರಿಹಾರ: ಸಚಿವ ಜಗದೀಶ್ ಶೆಟ್ಟರ್

ಕೇಂದ್ರದಿಂದ ಹೆಚ್ಚುವರಿ ಆಕ್ಸಿಜನ್; ಶೀಘ್ರ ಸಮಸ್ಯೆಗೆ ಪರಿಹಾರ: ಸಚಿವ ಜಗದೀಶ್ ಶೆಟ್ಟರ್

Spread the love

 

ಬೆಳಗಾವಿ;-ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಆಧರಿಸಿ ಹೆಚ್ಚುವರಿ ಆಕ್ಸಿಜನ್ ಹಂಚಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಪರಿಹಾರವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ರಾಜ್ಯದ ಆಕ್ಸಿಜನ್ ಪೂರೈಕೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಮೇ 9) ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೊಲ್ಲಾಪುರದಿಂದ ಬೆಳಗಾವಿ ಜಿಲ್ಲೆಗೆ ಪೂರೈಕೆಯಾಗುತ್ತಿದ್ದ 20 ಕೆ.ಎಲ್. ಆಕ್ಸಿಜನ್ ಪೂರೈಕೆ ನಿರ್ಬಂಧ ವಿಧಿಸಿದ್ದರೆ ಆಕ್ಸಿಜನ್ ಮರುಹಂಚಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಜತೆ ಚರ್ಚೆ ನಡೆಸಲಾಗುವುದು ಎಂದರು.

ಬಳ್ಳಾರಿಯಿಂದ ಮಹಾರಾಷ್ಟ್ರಕ್ಕೆ ಹಂಚಿಕೆಯಾಗಿದ್ದ ಆಕ್ಸಿಜನ್ ಪ್ರಮಾಣವನ್ನು ಕರ್ನಾಟಕ ರಾಜ್ಯಕ್ಕೆ ಮರುಹಂಚಿಕೆಯಾಗಿರುವುದರಿಂದ ಈ ಕುರಿತು ಅಲ್ಲಿನ ಸರಕಾರದ ಜತೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಕೇಂದ್ರ ಸರಕಾರ ಕೂಡ ಟ್ಯಾಂಕರ್ ನೀಡಲಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಗೆ ಒಂದು ಟ್ಯಾಂಕರ್ ಮೀಸಲಿಡಲಾಗುವುದು.

ಹೋಮ್ ಐಸೋಲೇಷನ್ ಇರುವವರಿಗೆ ಸರಿಯಾಗಿ ಔಷಧಿ ಕಿಟ್ ನೀಡುವುದರ ಜತೆಗೆ ಯಾವ ರೀತಿ ಮನೆಯಲ್ಲಿ ಆರೈಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯ ತಂಡಗಳು ತಿಳಿವಳಿಕೆಯನ್ನು ನೀಡಬೇಕು ಎಂದು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್ ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಒಂದು ವೇಳೆ ತಾಲ್ಲೂಕು ಕೇಂದ್ರಗಳಲ್ಲಿ ಬಳಕೆ ಮಾಡಲು ಸಾಧ್ಯವಾಗದಿದ್ದರೆ ಅಂತಹ ವೆಂಟಿಲೇಟರ್ ಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ಬಳಕೆ ಕುರಿತು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪರೀಕ್ಷಾ ವರದಿ ತಕ್ಷಣ ನೀಡಲು ಸಲಹೆ:

ಸೋಂಕು ತಪಾಸಣೆಗೆ ಮಾದರಿಯನ್ನು ಸಂಗ್ರಹಿಸಿದ ನಂತರ ಆದಷ್ಟು ಬೇಗನೇ ತಪಾಸಣಾ ವರದಿ ನೀಡಬೇಕು. ಇದರಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದು ಸಾಧ್ಯವಾಗಲಿದೆ.
ಆದ್ದರಿಂದ ಸಾಧ್ಯವಾದರೆ 24 ಗಂಟೆಯೊಳಗೆ ವರದಿ ನೀಡಲು ಕ್ರಮವಹಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬಿಮ್ಸ್ ನಲ್ಲಿ ಅಗತ್ಯವಿರುವ ವೈದ್ಯರು, ತಂತ್ರಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಸರಕಾರ ಈಗಾಗಲೇ ಅನುಮತಿ ನೀಡಿರುತ್ತದೆ. ಆದ್ದರಿಂದ ‌ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಬಿಮ್ಸ್ ಗೆ ಇನ್ನೂ ಹೆಚ್ಚಿನ ಆಕ್ಸಿಜನ್ ಹಾಗೂ ಸಿಬ್ಬಂದಿ ಒದಗಿಸಿದರೆ ಗರಿಷ್ಠ 822 ಬೆಡ್ ಗಳನ್ನು ಒದಗಿಸಬಹುದು. ಇದರಿಂದ ಸಮಸ್ಯೆಯನ್ನು ಪರಿಹರಿಸಬಹುದು ಎಂದು ತಿಳಿಸಿದರು.

ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚನೆ:

ಮಾರ್ಗಸೂಚಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
ನಾಳೆಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.

ರೆಮಿಡಿಸಿವಿರ್ ಪೂರೈಕೆ ಸಮರ್ಪಕವಾಗಿ ಇಲ್ಲದಿರುವುದರಿ‌ಂದ ಪ್ರತಿದಿನ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಅನಿಲ್ ಬೆನಕೆ ಸಭೆಯಲ್ಲಿ ತಿಳಿಸಿದರು.

ಎನ್.ಜಿ.ಓ. ಗಳಿಗೆ ಆಕ್ಸಿಜನ್ ಪೂರೈಕೆ; ಸ್ಪಷ್ಟನೆ ನೀಡಲು ಸಲಹೆ

ನಗರದಲ್ಲಿ ಕೆಲವು ಸಂಘ-ಸಂಸ್ಥೆಗ(ಎನ್.ಜಿ.ಓ)ಗಳು ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ಆಕ್ಸಿಜನ್ ಒದಗಿಸುವ ಕುರಿತು ಇರುವ ನಿಯಮಾವಳಿಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಬೇಕು. ಇದರಿಂದ ಎನ್.ಜಿ.ಓ. ಗಳಿಗೆ ಆಕ್ಸಿಜನ್ ಒದಗಿಸುತ್ತಿಲ್ಲ ಎಂಬ ತಪ್ಪುಕಲ್ಪನೆಗಳನ್ನು ದೂರ ಮಾಡಬಹುದು ಎಂದು ಶಾಸಕ ಅಭಯ್ ಪಾಟೀಲ ಹೇಳಿದರು.

ಆಕ್ಸಿಜನ್ ಸಮರ್ಪಕ ಪೂರೈಕೆಗೆ ಕ್ರಮ:

ಕೊಲ್ಲಾಪುರದಿಂದ 20 ಕೆ.ಎಲ್. ಪೂರೈಕೆಯಾಗುತ್ತಿತ್ತು.‌ ಕೈಗಾರಿಕಾ ಆಕ್ಸಿಜನ್ ಸಾಗಾಣಿಕೆಗೆ ಕೆಲ ನಿರ್ಬಂಧ ವಿಧಿಸಿರುವುದರಿಂದ ಸ್ವಲ್ಪಮಟ್ಟಿಗೆ ಕೊರತೆ ಕಂಡುಬರುತ್ತಿದೆ.
ಜಿಲ್ಲೆಯ ಆಕ್ಸಿಜನ್ ಪೂರೈಕೆ ಟ್ಯಾಂಕರ್ ಅಪಘಾತವಾಗಿದ್ದರಿಂದ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಟ್ಯಾಂಕರ್ ಸರಿಯಾದ ಬಳಿಕ ಆಕ್ಸಿಜನ್ ಸಾಗಾಣಿಕೆಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆ ಪ್ರಮಾಣ ಕೊರತೆಯಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಇದಲ್ಲದೇ ಸಂಗ್ರಹಣೆ ಸಾಮರ್ಥ್ಯವನ್ನು ಕೂಡ ಕ್ರಮೇಣವಾಗಿ ಹೆಚ್ಚಿಸಲು ಕ್ರಮ‌ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಲಕ್ಷಣ ಹೊಂದಿರುವವರ ಮಾದರಿಯನ್ನು ಪರೀಕ್ಷಿಸಲಾಗುತ್ತಿದ್ದು, ಸೋಂಕಿನ ಪ್ರಮಾಣ ಶೇ.28 ರಷ್ಟಿದೆ.
ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಸರಕಾರದ ಮಾರ್ಗಸೂಚಿ ಪ್ರಕಾರ ಎರಡನೇ ಡೋಜ್ ಮಾತ್ರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ವಿವರಿಸಿದರು.

ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರು, ಈಗಾಗಲೇ ಹತ್ತು ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಕ್ಸಿಜನ್ ಹಾಗೂ ಅಗತ್ಯ ಸಿಬ್ಬಂದಿ ‌ಒದಗಿಸಿದರೆ ಒಟ್ಟಾರೆ 822 ಬೆಡ್ ಗಳನ್ನು ಸೋಂಕಿತರ ಚಿಕಿತ್ಸೆಗೆ ಒದಗಿಸಬಹುದು ಎಂದು ಸಚಿವರಿಗೆ ವಿವರಿಸಿದರು.

ಜಿಲ್ಲೆಯಲ್ಲಿ 1456 ಸಕ್ರಿಯ ಪ್ರಕರಣ:

6380 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ ಒಟ್ಟು 1456 ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1456 ಜನರ ಪೈಕಿ 599 ಜನರು‌ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 372 ಜನರು ಸೋಂಕಿನಿಂದ ಮರಣ ಹೊಂದಿರುತ್ತಾರೆ ಎಂದು ತಿಳಿಸಿದರು.

ಸಂಸದರಾದ ಮಂಗಲಾ ಅಂಗಡಿ, ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ್, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ