ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕರು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ರೈತ ಮಹಿಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಧೈರ್ಯ ಹೇಳಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯನಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ವಿಡಿಯೋ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಆದರೂ ರೈತ ಮಾತ್ರ ಕೆಲಸ ಮಾಡುತ್ತಿದ್ದಾನೆ. ದೇಶ ಆಳುವ ಪ್ರಧಾನಿಯಿಂದ, ದೇಶ ಕಾಯೋ ಸೈನಿಕ ಕೂಡ ತಿನ್ನೋದು ರೈತ ಬೆಳೆದ ಬೆಳೆಯನ್ನೇ. ಆದರೆ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲ ಎಂದು ರೈತರ ಕಷ್ಟದ ಬಗ್ಗೆ ತಿಳಿಸಿದ್ದಾರೆ.
ಈರುಳ್ಳಿ ಬೆಳೆಗೆ ಬೆಲೆ ಇಲ್ಲ. ಚೀಲ ಈರುಳ್ಳಿಗೆ 250-300 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಆದರೆ ಈರುಳ್ಳಿ ಬಿತ್ತನೆ, ಕೊಯ್ಯೋದಕ್ಕೆ ಮತ್ತು ಕೂಲಿ ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಹೀಗಾಗಿ ಒಂದು ಚೀಲ ಈರುಳ್ಳಿ ಬೆಳೆಯೋದಕ್ಕೆ ಕನಿಷ್ಠ 500-600 ರೂಪಾಯಿ ಖರ್ಚಾಗತ್ತೆ. ಆದರೆ ಮಾರುಕಟ್ಟೆಯಲ್ಲಿ ನಮ್ಮ ಬೆಳೆಗೆ ಬೆಲೆಯೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಸಿಎಂ ಯಡಿಯೂರಪ್ಪ ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆಗೆ ಅಭಯ ನೀಡಿದ್ದಾರೆ. ರೈತ ಮಹಿಳೆಗೆ ಫೋನ್ ಮಾಡಿ ಆಕೆಯ ಜಾಣತನಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆ ಸಿಎಂ ಧೈರ್ಯ ತುಂಬಿದ್ದಾರೆ.
ಸಿಎಂ ಫೋನ್ ಮಾಡಿದ್ದಾಗ ರೈತ ಮಹಿಳೆ, ಸುಮಾರು ರೈತರು ಈರುಳ್ಳಿ ಬೆಳೆದಿದ್ದೇವೆ. ಗ್ರೀನ್ ಪಾಸ್ ಕೊಡಿಸಿದ್ದೀರಿ. ಆದರೆ ಹೆಚ್ಚು ಅಂದರೂ 1 ಚೀಲಕ್ಕೆ 400 ರೂ. ಕೊಡುತ್ತಾರೆ ಅಷ್ಟೆ. ಸರ್ಕಾರದ ಸೌಲಭ್ಯ ಯಾವುದು ರೈತರಿಗೆ ತಲುಪುತ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ, ಬೆಲೆ ಕಡಿಮೆ ಇದೆ ಅಲ್ವಾ? ಡಿಸಿ ಜೊತೆ ಮಾತನಾಡುತ್ತೀನಿ. ಏನು ವ್ಯವಸ್ಥೆ ಮಾಡಬೇಕು ಮಾಡಿಸುತ್ತೀನಿ. ಬಹಳ ಬುದ್ಧಿವಂತೆ ಇದ್ದೀಯಾ ಕಣ್ಣಮ್ಮ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಿಎಂ ಯಡಿಯೂರಪ್ಪ ಕೂಡಲೇ ಡಿಸಿಗೆ ಕರೆ ಮಾಡಿ, ಆ ಹಳ್ಳಿಗೆ ಭೇಟಿ ನೀಡಿ ಮಹಿಳೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಮಹಿಳೆ ಬೆಳೆದ ಈರುಳ್ಳಿ ಮತ್ತು ಇತರ ರೈತರು ಅಲ್ಲಿ ಈರುಳ್ಳಿ ಬೆಳೆದು ತೊಂದರೆಗೀಡಾಗಿದ್ದರೆ ಕೂಡಲೇ ಸರ್ಕಾರದ ವತಿಯಿಂದ ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ.