ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಆಯ್ದೆಯಾದ ಕುರಿತು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದಾರೆ.
ದೆಹಲಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಬಗ್ಗೆ ನಾನೇ ಅವರಿಗೆ ತಿಳಿಸಿದ್ದೆ, ಮುಂದಿನ ದಿನಗಳಲ್ಲಿ ಎಲ್ಲರನ್ನೂಒಟ್ಟುಗೂಡಿಸಿಕೊಂಡು ಪಕ್ಷವನ್ನ ಬಲಪಡಿಸುವ ಕೆಲಸ ಮಾಡ್ತಾರೆ. ಎಲ್ಲ ಹಿರಿಯ, ಕಿರಿಯ, ಕಾರ್ಯಕರ್ತರು ಅವರಿಗೆ ಸಹಕಾರ ಇದ್ರೆ ಮಾತ್ರ ಉತ್ತಮ ಸಂಘಟನೆ ಸಾಧ್ಯ. ಒಬ್ಬ ವ್ಯಕ್ತಿ ಎಷ್ಟೇ ಸಮರ್ಥನಾಗಿದ್ದರೂ ಎಲ್ಲರ ಸಹಕಾರ ಮುಖ್ಯ. ಹೊಸ ಅಧ್ಯಕ್ಷರು ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ. ಆ ವಿಶ್ವಾಸ ನಮಗಿದೆ ಎಂದು ಖರ್ಗೆ ಅವರು ತಿಳಿಸಿದರು.
ಇನ್ನು ಕೊರೊನಾ ಸೋಂಕಿಗೆ ದೇಶದಲ್ಲಿ ಮೊದಲ ಜೀವಹಾನಿ ಬಗ್ಗೆ ಮಾತನಾಡಿ, ಹೌದು ಕಲಬುರಗಿಯಲ್ಲಿ ಸಿದ್ದಿಕೆ ಎನ್ನುವ ವೃದ್ಧನ ಜೀವಹಾನಿಯಾಗಿದೆ. ಅಧಿಕಾರಿಗಳು ಕಾಳಜಿ ತೆಗೆದುಕೊಂಡಿದ್ದಾರೆ. ಅಂತ್ಯಸಂಸ್ಕಾರದ ವೇಳೆಯಲ್ಲಿಯೂ ನಿಗಾವಹಿಸಿದ್ದಾರೆ. ವ್ಯಕ್ತಿ ಇಲ್ಲಿಗೆ ಬಂದ ಮೇಲೆ ನೂರಾರು ಜನರನ್ನ ಭೇಟಿ ಮಾಡಿದ್ದಾರೆ. ಈಗ ಅವರೆಲ್ಲರನ್ನು ಪರಿಶೀಲಿಸುವ ಪ್ರಯತ್ನ ಮಾಡ್ತಿದ್ದಾರೆ ಎಂದರು.
ಇದೇ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, ಪಕ್ಷದಲ್ಲಿ ಎಲ್ಲರ ಸಹಕಾರ ನನಗೆ ಮುಖ್ಯ. ಹಿರಿಯರ, ಕಿರಿಯರ ಸಹಕಾರ ಬೇಕು. ಅದಕ್ಕೆ ಎಲ್ಲರನ್ನ ಭೇಟಿ ಮಾಡುತ್ತಿದ್ದೇವೆ. ಅವರ ಸಹಕಾರವಿಲ್ಲದೆ ಏನೂ ಮಾಡೋಕೆ ಸಾಧ್ಯವಿಲ್ಲ ಎಂದರು.
ಇನ್ನು ಪದಗ್ರಹಣದ ವಿಚಾರವಾಗಿ ಮಾತನಾಡಿ, ಎಲ್ಲ ನಾಯಕರನ್ನ ದೆಹಲಿಗೆ ಕರೆದೊಯ್ಯುತ್ತೇನೆ. ನಂತರ ಚರ್ಚೆ ಮಾಡಿ ನಾವು ನಿರ್ಧಾರ ತೆಗೆದುಕೊಳ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.