ವಿಜಯಪುರ(ಏ.12): ವಿಜಯಪುರದಲ್ಲಿ ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿದೆ. ಕೊರೋನಾ ನಿಗ್ರಹಕ್ಕಾಗಿ ಹಲವಾರು ಮುಂಜಾಗ್ರತಾ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ವಿಜಯಪುರ ಜಿಲ್ಲಾಡಳಿತವು ತೆಗೆದುಕೊಂಡಿದೆ. ಈಗ ವಿಜಯಪುರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿದೆ.
ಹೌದು, ವಿಜಯಪುರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 150ಕ್ಕೂ ಹೆಚ್ಚು ರೋಗಿಗಳಿದ್ದು, ಅವರನ್ನು ನಗರದ ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಜನರಲ್ ವಾರ್ಡ್, ಡಯಾಲಿಸಿಸ್ ವಾರ್ಡ್ ಸೇರಿದಂತೆ ನಾನಾ ವಾರ್ಡ್ಗಳ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಸ್ಥಳಾಂತರ ಪ್ರಕ್ರಿಯೆ ನಿನ್ನೆ ಮಧ್ಯರಾತ್ರಿವರೆಗೆ ನಡೆದಿದೆ. ವಿಜಯಪುರ ಕೋವಿಡ್ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ.
ಇನ್ನು, ವಿಜಯಪುರ ನಗರದ ಗೋಳಗುಮ್ಮಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಪೊಲೀಸರು ಹಲವು ಬಡಾವಣೆಗಳನ್ನು ಲಾಕಡೌನ್ ಮಾಡಿದ್ದಾರೆ. ಈ ಬಡಾವಣೆಗಳಿಗೆ ಯಾರೂ ಹೋಗುವಂತಿಲ್ಲ, ಯಾರೂ ಬರುವಂತಿಲ್ಲ ಎಂದು ಸೂಚಿಸಿ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.