ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೇಂದ್ರಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಸ್ಪಷ್ಟಪಡಿಸಿದ್ದು, ಕೋರೆಗಾಂವ್ ಗಲಭೆಯ ವೇಳೆ ದಲಿತ ಸಮುದಾಯದ ಮೇಲಿನ ದೌರ್ಜನ್ಯವು “ದುರದೃಷ್ಟಕರ” ಎಂದು ಹೇಳಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಉದ್ದವ್ ಠಾಕ್ರೆ, ಎಲ್ಗರ್ ಮತ್ತು ಭೀಮಾ ಕೋರೆಗಾಂವ್ ಎರಡೂ ಪ್ರತ್ಯೇಕ ಪ್ರಕರಣಗಳಾಗಿವೆ, ದಲಿತ ಸಹೋದರರು ಭೀಮಾ ಕೋರೆಗಾಂವ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ತನಿಖೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡುವುದಿಲ್ಲ. ದಲಿತ ಸಹೋದರರಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದರು.
ಡಿಸೆಂಬರ್ 31, 2017ರಲ್ಲಿ ಪುಣೆ ಸಮೀಪ ಎಲ್ಗರ್ ಪರಿಷತ್ ಸಮಾವೇಶದಲ್ಲಿ ನಡೆಸಿದ ಪ್ರಚೋದನಾಕಾರಿ ಭಾಷಣೆ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಸಿತ್ತು. ಈ ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಈ ನಿರ್ಧಾರದ ವಿರುದ್ಧ ಎನ್ ಸಿಪಿ ಶರದ್ ಪವಾರ್ ಕಿಡಿಕಾರಿದ್ದರು.