ಮೈಸೂರು, ಫೆ.20- ನಗರದ ಹೃದಯ ಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಕಾಣಿಸಿಕೊಂಡಿರುವ ಬಿರುಕಿನಿಂದ ಸದ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಇತಿಹಾಸ ತಜ್ಞ ಡಾ.ರಂಗರಾಜು ತಿಳಿಸಿದರು.
ಪ್ರತಿಮೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ಷ್ಮವಾಗಿ ಪ್ರತಿಮೆಯನ್ನು ಪರೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಮೆಯ ಕಲ್ಲಿನಲ್ಲಿನ ದೋಷದಿಂದ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ ಎಂದರು.
ಇದು ನಗರದ ಪ್ರಮುಖ ವೃತ್ತವಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ವಾಹನಗಳಿಂದ ಹೊರ ಹೊಮ್ಮುವ ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮಾನಾಕ್ಸೈಡ್‍ನಿಂದ ಪ್ರತಿಮೆ ಹಾಳಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಪ್ರತಿಮೆಯಲ್ಲಿನ ಕತ್ತಿಗೆ ಬಳಸಲಾಗಿರುವ ಶಿಲೆ ಉತ್ತಮ ಗುಣಮಟ್ಟದಲ್ಲ. ಹಾಗಾಗಿ ಪದೇ ಪದೇ ಹಾಳಾಗುತ್ತಿದೆ.
ಈಗ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಮುಂದೆ ಮಳೆಗಾಲದಲ್ಲಿ ತೊಂದರೆಯಾಗುವ ಸಾಧ್ಯತೆ ಇದ್ದು, ಅಷ್ಟರಲ್ಲಿ ವೈಜ್ಞಾನಿಕವಾಗಿ ಪ್ರತಿಮೆಯನ್ನು ಸಂರಕ್ಷಿಸುವ ಕ್ರಮ ಕೈಗೊಳ್ಳಬೇಕಿದೆ. ಬಿರುಕು ಬಿಟ್ಟಿರುವ ಸ್ಥಳಕ್ಕೆ ಅಮೃತ ಶಿಲೆಯ ಪುಡಿ ಬಳಿಸಿ ಸರಿ ಪಡಿಸಬಹುದಾಗಿದೆ ಎಂದು ರಂಗರಾಜು ಹೇಳಿದರು.