ಬೆಂಗಳೂರು: ಚಂದನವದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಫಿಟ್ನೆಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಮ್ಮ ಸ್ಯಾಂಡಲ್‍ವುಡ್‍ನಲ್ಲಿ ಫಿಟ್ನೆಸ್, ಡ್ಯಾನ್ಸ್ ಹಾಗೂ ಫೈಟ್ ಹೀಗೆ ಎಲ್ಲದಕ್ಕೂ ಸೈ ಅನ್ನುವ ನಟರಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮುಂಚೂಣಿಗೆ ಬರುತ್ತಾರೆ. ವಯಸ್ಸು 45 ಅದರೂ ದೇಹದಲ್ಲಿ ಮೂಳೆಯೇ ಇಲ್ಲ ಎಂಬತೆ ಡ್ಯಾನ್ಸ್ ಮಾಡುವ ಅಪ್ಪು ದೇಹ ದಂಡಿಸುವ ವಿಚಾರದಲ್ಲೂ ಯಾವಾಗಲೂ ಮುಂದೆ ಇರುತ್ತಾರೆ. ಹಾಗೆಯೇ ಲಾಕ್‍ಡೌನ್ ಸಮಯದಲ್ಲಿ ಅಪ್ಪು ಮನೆಯಲ್ಲೇ ಕಸರತ್ತು ಮಡುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟಯ ವೈರಲ್ ಆಗುತ್ತಿದ್ದು, ಅಪ್ಪು ದೇಹದಂಡನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಅಪ್ಪು ಅವರ ಈ ಕಸರತ್ತಿನ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಿರ್ದೇಶಕ ಸಂತೋಷ್ ಅನಂದ್‍ರಾಮ್, `ಪವರ್ ಸ್ಟಾರ್` ಎಂಬ ಬಿರುದು ಶಿವಣ್ಣ ಕೊಟ್ಟಿದ್ದಕ್ಕೂ, ಅಭಿಮಾನಿಗಳು ಎದೆಯಲ್ಲಿಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ, ಕರ್ನಾಟಕ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕವಾಗಿದೆ. ಪವರ್ ಸ್ಟಾರ್ 45ರ ವಯಸ್ಸಿನಲ್ಲೂ ಕಾಲೇಜು ಯುವಕನ ಪಾತ್ರ ಮಾಡುವಷ್ಟು ಫಿಟ್ ಆಗಿ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೇವಲ 17 ಸೆಕೆಂಡ್ ಇರುವ ಪುನೀತ್ ಅವರ ಈ ವಿಡಿಯೋದಲ್ಲಿ ಅಪ್ಪು ಜಿಗಿದು ಬಂದು ಲೆಗ್ ಪಂಚ್ ಜೊತೆಗೆ ಬ್ಯಾಕ್‍ಫ್ಲಿಪ್ ಹೊಡೆದಿದ್ದಾರೆ. ಈಗ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಈ ವಿಡಿಯೋವನ್ನು ಅಪ್ಪು ಕೂಡ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಸ್ಟೇ ಹೋಂ, ಸ್ಟೇ ಸೇಫ್, ಸ್ಟೇ ಫಿಟ್ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪವರ್ ಸ್ಟಾರ್ ಫಿಟ್ನೆಸ್ ನೋಡಿದ ಅವರ ಅಭಿಮಾನಿಗಳು ಪವರ್ ಸ್ಟಾರ್ ಎಂಬ ಬಿರುದು ಇವರಿಗೆ ಮಾತ್ರ ಸೂಟ್ ಆಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
ಸದ್ಯ ಲಾಕ್‍ಡೌನ್ ನಡುವೆ ಮನೆಯಲ್ಲೇ ಕುಟುಂಬದವರ ಜೊತೆ ಕಾಲಕಳೆಯುತ್ತಿರುವ ಪವರ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಜೊತೆಗೆ ಮನೆಯಲ್ಲೇ ಕುಳಿತು ತಮ್ಮ ಅಭಿಮಾನಿಗಳಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇದರ ಜೊತೆಗೆ ಕೊರೊನಾ ಸಿಎಂ ಪರಿಹಾರ ನಿಧಿಗೆ ಪುನೀತ್ ಅವರು 50 ಲಕ್ಷ ದೇಣಿಗೆ ಕೂಡ ನೀಡಿದ್ದರು.