ಗೋಕಾಕ :ಭಾರತೀಯರಲ್ಲಿ ಸಂಬಂಧಗಳ ಕೊಂಡಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಕೊರೋನಾ ವೈರಸ್ ದೇಶದ ಜನಜೀವನದ ಪ್ರಮುಖವಾಗಿದ್ದ ಸಂಬಂಧವನ್ನೇ ಅಸ್ತವ್ಯಸ್ತಗೊಳಿಸಿದೆ. ಅಷ್ಟೇಅಲ್ಲ, ಸಂಬಂಧಗಳ ಬಣ್ಣವನ್ನೂ ಬಯಲು ಮಾಡಿದೆ.
ಹೇಗೆ ಅಂತ ನೀವು ಪ್ರಶ್ನಿಸುವಿರಾ ಹಾಗಾದರೆ ಇಲ್ಲಿನೋಡಿ ಎರಡು ಮಕ್ಕಳ ಇದ್ದರೂ ಓರ್ವನ ಬಾಳು ಹೇಗೆ ಬೀದಿಗೆ ಬಂದಿದೆ ಎಂದು ತಿಳಿಯಿರಿ.
ಮಲ್ಲಪ್ಪ ಅಕ್ಕಿವಾಟ ಎಂಬವನು ಪಕ್ಕದ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದವನು. ಸದ್ಯ ಗೋಕಾಕದ ಬಸವೇಶ್ವರ ವೃತ್ತದಲ್ಲಿನ ಅಂಗಡಿಯೊಂದರ ಮುಂಭಾಗದಲ್ಲಿ ಒಲೆ ಹೂಡಿ ಚಹಾ ಮಾಡಿಕೊಳ್ಳುತ್ತಿದ್ದಾನೆ. ಸ್ಥಳೀಯ ಸಾರ್ವಜನಿಕ ಸಂಘಟನೆಗಳು ಅವನಿಗೆ ಊಟ, ಉಪಹಾರ ನೀಡಿ ಆತನ ಹೊಟ್ಟೆಯ ಬೇಗೆಯನ್ನು ತಣಿಸುತ್ತಿವೆ. ಮನೆಯಿಂದ ತಂದ ಒಂದೆರಡು ಕೈಚೀಲಗಳಲ್ಲಿನ ಬಟ್ಟೆ-ಬರೆಗಳನ್ನು ಹರಡಿಕೊಂಡು ಕುಳಿತು ಆತ ದಿನ ಕಳೆಯುತ್ತಿದ್ದಾನೆ.
ಭಿಕ್ಷುಕನಂತೆ ಕಾಣುವ ಹುಚ್ಚನಲ್ಲದ ಆತ ನಮ್ಮ ಗಮನ ಸೆಳೆದಾಗ ಆತನನ್ನು ಮಾತನಾಡಿಸಿದಾಗ ಸಂಬಂಧಗಳ ಬೇರುಗಳು ಹೇಗೆ ಬಿರುಕು ಬಿಡುತ್ತವೆ ಎನ್ನುವದು ತಿಳಿಯಿತು.
ಮಲ್ಲಪ್ಪಾ ರಸ್ತೆ ಮ್ಯಾಗ ಅಂಗಡಿ ಕಟ್ಟಿ ಮ್ಯಾಗ ನಾಲ್ಕು ದಿನದಿಂದ ಇದೀಯಾ ಎಂದು ಪ್ರಶ್ನಿಸಿದಾಗ ಆತನ ಉತ್ತರ ಗಾಬರಿಗೊಳ್ಳುವಂತೆ ಮಾಡಿತು.
ಏನ ಮಾಡೂದ್ರಿ ಸಾಹೇಬರ ಯಾವುದೋ ರೋಗ ಬಂದೈತಂತ್ರಿ, ಬಸ್‍ಗಳು ಬಂದ್ ಆಗ್ಯಾವು ಅದಕ ಒಂದು ವಾರದಿಂದ ನಾ ಇಲ್ಲೇ ಉಳಿಬೇಕಾತ್ರಿ.
ನನಗ ಇಬ್ರು ಹೆಣ್ಣಮಕ್ಳರೀ…ಒಬ್ಬಳನ್ನ ಚಿಂಚಲಿ ಊರಿಗೆ ಕೊಟ್ಟಿನ್ರಿ. ಇನ್ನೊಬ್ಬಳನ್ನ ಇಲ್ಲೇ ಬೆಣಚಿನಮರಡಿಗೆ ಕೊಟ್ರೇನ್ರಿ. ಹೆಂಡತಿ ನಾಲ್ಕ ತಿಂಗಳ ಹಿಂದ ತೀರ್ಕೊಂಡಾಳ್ರಿ…
ಮಗಳಿಗೆ ಫೋನ ಮಾಡಿ ಹೇಳೆನ್ರಿ…ನಾಳೆ ಬಂದ ಕರ್ಕೊಂಡ ಹೊಕ್ತೇನಿ ಅಂದಾಳ್ರಿ. ಇನ್ನೂ ತನಕಾ ಬಂದಿಲ್ಲ. ಪೋಲೀಸ್ರು ಫೋನ ಮಾಡಿ ಹೇಳ್ಯಾರ ಕರ್ಕೊಂಡ ಹೋಗಾಕ ಬರತೇವು ಅಂದಾರ ಇನ್ನೂ ಬಂದಿಲ್ಲಾ. ಪಾಪ ಅವರಾದರೂ ಏನ ಮಾಡಬೇಕ್ರಿ…ಯಾವುದೋ ರೋಗ ಬಂದೈತಂಥ ಯಾವಾಗ ಬರತಾರೋ ಬರ್ಲಿ ಎಂದ.
ಇಂಥದೇ ಇನ್ನೊಂದು ಪ್ರಕರಣ ಗ್ರಾಮದೇವಿ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ನಡೆದಿದೆ. ನಗರದ ವೈದ್ಯರೊಬ್ಬರು ಅವರ ಊಟೋಪಚಾರ ನೋಡಿಕೊಳ್ಳುತ್ತಿದ್ದಾರೆ.
ಇಟಲಿಯಲ್ಲಿ ತನ್ನವರೆಲ್ಲಾ ಸತ್ತುಹೋದರೆಂದು ಉಳಿದವನೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ಬಹುಮಹಡಿ ಕಟ್ಟಡ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ, ಇಲ್ಲಿ ಹೆತ್ತವರನ್ನೇ ಹಾದಿಯಲ್ಲಿ ಬಿಟ್ಟು ಹೆಂಡತಿ ಮಕ್ಕಳೊಂದಿಗೆ ಹಾಯಾಗಿರುವುದನ್ನು ನೋಡಿದರೆ ಕೊರೋನಾ ವೈರಸ್ ಸಂಬಂಧಗಳ ಕೊಂಡಿಯನ್ನೇ ಕಳಚ ತೊಡಗಿದೆ ಎಂಬ ವಿಷಯ ಮೇಲ್ನೋಟಕ್ಕೆ ಸಾಬಿತಾಗುತ್ತದೆ .
Check Also
ಮರಾಠ ರೆಜಿಮೆಂಟ್‌ನಲ್ಲಿ ನೇಮಕಾತಿ ರಾಲಿ; ಯುವಕರಿಂದ ನೂಕುನುಗ್ಗಲು, ತಳ್ಳಾಟ
Spread the love ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿ ಮರಾಠ ರೆಜಿಮೆಂಟ್ ನಲ್ಲಿ ಸೇನಾ ನೇಮಕಾತಿ ಮುಕ್ತ ರಾಲಿ ನಡೆಯುತ್ತಿದ್ದು, …