ಬೆಂಗಳೂರು, ಏ.14- ಕೊರೊನಾ ಹೊಡೆತಕ್ಕೆ ಸರ್ಕಾರದ ಬೊಕ್ಕಸ ತತ್ತರಿಸಿರುವ ಹಿನ್ನೆಲೆಯಲ್ಲಿ ನೌಕರರ ವೇತನಕ್ಕಾಗಿ ಎ ಗ್ರೇಡ್ ದೇವಾಲಯಗಳ ಹುಂಡಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಮೇ ತಿಂಗಳ ವೇತನ ನೀಡಿದರೂ ಜೂನ್‍ನಿಂದ ಎದುರಾಗುವ ಸಂಕಟವನ್ನು ಪರಿಹರಿಸಲು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹಲ ದೇವಾಲಯಗಳ ಹುಂಡಿ ಮೇಲೆ ಸರ್ಕಾರ ಕಣ್ಣು ಹಾಕಿದೆ ಎನ್ನಲಾಗಿದೆ.
ಆರ್ಥಿಕ ಸಂಕಷ್ಟ ಪರಿಹಾರಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಉನ್ನತಾಧಿಕಾರಿಗಳ ಪಡೆಯೊಂದನ್ನು ರಚಿಸಿಕೊಂಡಿದ್ದು, ಈ ಪಡೆ ಆದಾಯ ಮೂಲಗಳ ಮೇಲೆ ಕಣ್ಣಿಟ್ಟಿದೆ. ಈ ಪಡೆ ಮುಖ್ಯಮಂತ್ರಿಗಳ ಖಾಸಾ ಪಡೆಯಾಗಿದ್ದು ಅನುದಿನವೂ ಕಾರ್ಯ ನಿರ್ವಹಿಸುತ್ತಿದೆ.
ಎ ಮತ್ತು ಬಿ ದರ್ಜೆ ನೌಕರರ ವೇತನ ಹಾಗೂ ಪಿಂಚಣಿಯಲ್ಲಿ ಶೇ.20ರಷ್ಟು ಕಡಿತ ಮಾಡುವುದು ಅನಿವಾರ್ಯ ಎಂದು ಈ ಪಡೆ ಸಲಹೆ ನೀಡಿದೆ. ಇದೇ ರೀತಿ ಖಾಸಗಿಯವರಿಂದ ಯಾವ್ಯಾವ ಹಂತಗಳಲ್ಲಿ ನೆರವು ಪಡೆಯಬಹುದು ಎಂಬುದರ ಬಗ್ಗೆಯೂ ಈ ಪಡೆ ಕುತೂಹಲಕಾರಿ ಸಲಹೆ ನೀಡಿದೆ.
ರಾಜ್ಯದ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಯೋಜನೆ ಮತ್ತು ಯೋಜನೇತರ ಬಾಬ್ತಿಗೆ ನೀಡಿರುವ ಗಣನೀಯ ಪ್ರಮಾಣದ ಹಣವನ್ನು ಒದಗಿಸಲು ಸಾಧ್ಯವಾಗದೆ ಇರುವುದರಿಂದ ಆಯಾ ಬಾಬ್ತಿನ ಕೆಲ ಕ್ಷೇತ್ರಗಳಲ್ಲಿ ಖಾಸಗಿಯವರ ನೆರವು ಪಡೆಯುವುದು ಈ ಪಡೆಯ ಪ್ರಸ್ತಾಪವಾಗಿದೆ.