ನವದೆಹಲಿ, ಏ.14-ಮಾರಕ ಕೊರೊನಾ ವೈರಸ್ ಸೃಷ್ಟಿಸಿರುವ ಸಂಕಷ್ಟದಿಂದ ದೇಶ ಶೀಘ್ರವೇ ಮುಕ್ತವಾಗಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ಅಗತ್ಯವಾದ ಎಲ್ಲ ನೆರವು ನೀಡಲಿದೆ ಎಂದು ಸೋನಿಯಾ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಪಕ್ಷದ ಅಧಿನಾಯಕಿ, ಸದೃಢ ನೈತಿಕ ಸ್ಥೈರ್ಯದಿಂದ ದೇಶವು ಈ ಮಹಾಮಾರಿಯ ವಿರುದ್ಧ ಗೆಲುವು ಸಾಧಿಸಲಿದೆ. ಶೀಘ್ರವೇ ಈ ಸಂಕಷ್ಟ ಕೊನೆಗೊಳ್ಳಲಿದೆ ಎಂದು ವಿಶ್ವಾಸದಿಂದ ನುಡಿದರು.
ಭಾರತೀಯರೆಲ್ಲರೂ ಪರಿಸ್ಥಿತಿ ತಿಳಿಯಾಗುವ ತನಕ ಮನೆಯೊಳಗೆ ಇರಬೇಕು. ಸುರಕ್ಷತೆ ಮತ್ತು ಲಾಕ್‍ಡೌನ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಪ್ರತಿಯೊಬ್ಬರ ಸಹಕಾರ ಮತ್ತು ಬೆಂಬಲ ಇಲ್ಲದೇ ಈ ಯುದ್ಧದಲ್ಲಿ ಗೆಲವು ಸಾಧಿಸುವುದು ಅಸಾಧ್ಯ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ವಿಸ್ತರಣೆ ಕುರಿತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಕ್ಕೆ ಮುನ್ನ ವಿಡಿಯೋ ಸಂದೇಶ ನೀಡಿರುವ ಸೋನಿಯಾ, ಜನರು ಈ ಅವಧಿಯಲ್ಲಿ ಅತ್ಯಂತ ಶಾಂತಿ ಮತ್ತು ಸಹನೆಯಿಂದ ಇರಬೇಕು. 21 ದಿನಗಳ ಅವಧಿಯಲ್ಲಿ ಜನರು ನೀಡಿದ ಬೆಂಬಲಕ್ಕಾಗಿ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಇಂದು ಇಂಥ ದೊಡ್ಡ ಹೋರಾಟದಲ್ಲಿ ದೇಶವು ತೊಡಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಇದರನ್ನು ಮುಂದುವರಿಸುವಂತೆ ಅವರು ಕಾಂಗ್ರೆಸ್ ಮುಂದಾಳುಗಳಿಗೆ ಕರೆ ನೀಡಿದ್ದಾರೆ.