ಮಂಡ್ಯ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಇಷ್ಟು ದಿನ ಸಕ್ಕರೆ ನಾಡು ಮಂಡ್ಯದಿಂದ ದೂರವೇ ಉಳಿದಿತ್ತು. ಆದರೆ ಈಗ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದ ಏಳು ಜನರಿಂದ ಮಂಡ್ಯದಲ್ಲೂ ಸಹ ಕೊರೊನಾ ವೈರಸ್ ಕಂಡು ಬಂದಿದೆ. ಈ ಭಯದಿಂದಲೇ ಜಿಲ್ಲೆಯಲ್ಲಿ ರೈತನೊಬ್ಬ ನೋಟುಗಳನ್ನು ಸೋಪಿನ ನೀರಿನಿಂದ ತೊಳೆದಿದ್ದಾನೆ.
ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೋಟಿನಿಂದ ಕೊರೊನಾ ಹರಡುತ್ತೆ ಎಂದು ನೋಟುಗಳನ್ನು ನೀರಿನಿಂದ ರೈತ ತೊಳೆದಿದ್ದಾನೆ. ರೈತ ತಾನು ಬೆಳೆದ ರೇಷ್ಮೆಯನ್ನು ಮಾರಾಟ ಮಾಡಿದ್ದನು. ಈ ವೇಳೆ ಮುಸ್ಲಿಂ ವ್ಯಾಪಾರಿ ರೇಷ್ಮೆ ತೆಗೆದುಕೊಂಡು ಹಣ ನೀಡಿದ್ದನು. ಆದರೆ ಮುಸ್ಲಿಂ ಕೊಟ್ಟ ನೋಟುಗಳನ್ನು ರೈತ ನೀರಿನಲ್ಲಿ ತೊಳೆದಿದ್ದಾನೆ.
ಮುಸ್ಲಿಂ ವ್ಯಾಪಾರಿ ನೀಡಿದ ನೋಟು ಎಂದು ರೈತ 2 ಸಾವಿರ, 500, 100ರೂ. ಮುಖ ಬೆಲೆಯ ನೋಟುಗಳನ್ನು ಸೋಪಿನ ನೀರಿನಲ್ಲಿ ತೊಳೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ರೈತ ನೋಟು ತೊಳೆಯುವಾಗ ಸ್ಥಳದಲ್ಲಿದ್ದವರು ಅದನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜೀಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಮೂಲದ 7 ಮಂದಿ ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೇ ದೆಹಲಿಯಿಂದ ಬಂದಿದ್ದ 10 ಧರ್ಮಗುರುಗಳು ಸಹ ತಬ್ಲಿಘಿಗಳ ಜೊತೆ ಸಂಪರ್ಕದಲ್ಲಿದ್ದರು. ಈಗ ಮೂವರಿಗೆ ಸೋಂಕು ತಗುಲಿದ್ದು, ಇಬ್ಬರಿಗೆ ನೆಗೆಟಿವ್ ಬಂದಿದೆ. ಇಳಿದ ಇಬ್ಬರ ವರದಿ ಇನ್ನೂ ಬಂದಿಲ್ಲ.