ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಜನರು ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ.
ಮಹಾಮಾರಿಗೆ ‘ಕೊರೊನಾ ಅಮ್ಮ’ ಎಂದು ಹೆಸರಿಟ್ಟು ಪೂಜಿಸಲಾಗುತ್ತಿದೆ. ಗ್ರಾಮಗಳ ಹೊರವಲಯದಲ್ಲಿ ಎಮ್ಮೆಯ ಮುಖದ ರೀತಿಯಲ್ಲಿ ಮಣ್ಣಿನಲ್ಲಿ ಗೊಂಬೆ ತಯಾರಿಸಲಾಗಿದೆ. ಈ ಗೊಂಬೆಯನ್ನು ಕೊರೊನಾ ಅಮ್ಮನ ಪ್ರತಿರೂಪ ಎಂದು ಹೇಳ್ತಿರುವ ಜನರು ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಪೂಜೆ ಮಾಡುತ್ತಿದ್ದಾರೆ.
ಈ ಹಿಂದೆ ಗ್ರಾಮಗಳಲ್ಲಿ ಪ್ಲೇಗ್ ಬಂದಾಗ ಇದೇ ರೀತಿ ಊರಿನ ಹೊರಗಿನ ಕೆರೆ, ಕಟ್ಟೆ ದಂಡೆ ಬಳಿ ಪ್ಲೇಗಿನಮ್ಮ ಎಂದು ಪೂಜೆ ಸಲ್ಲಿಸಿದ್ದರು. ಇದೀಗ ಕೊರೊನಾ ಅಮ್ಮ ಎಂದು ಗೊಂಬೆ ತಯಾರಿಸಿ ಪೂಜೆ ಸಲ್ಲಿಸಿ, ಮಹಾಮಾರಿ ತೊಲಗುವಂತೆ ಜನರು ಪ್ರಾರ್ಥಿಸುತ್ತಿದ್ದಾರೆ.
ಸೋಮವಾರ ರಾಯಚೂರು ನಗರದಲ್ಲಿ ಅನಾಮಧೇಯ ಅಜ್ಜಿಯ ಮಾತು ಕೇಳಿದ ಮಹಿಳೆಯರು ಮಾರೆಮ್ಮ ದೇವಿಗೆ ಮೊಸರನ್ನ ನೈವೇದ್ಯ ಸಲ್ಲಿಸಿ ಕೊರೊನಾ ತೊಲಗುವಂತೆ ಪ್ರಾರ್ಥನೆ ಸಲ್ಲಿಸಿದ್ದರು. ಏಕಕಾಲದಲ್ಲಿ ನೂರಾರು ಮಹಿಳೆಯರು ಸೇರಿದ್ದರಿಂದ ಎಲ್ಲರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.