Breaking News

ಸಿದ್ದರಾಮಯ್ಯರನ್ನು ಮೂಲೆ ಗುಂಪು ಮಾಡಲು ಕಾಂಗ್ರೆಸ್‌ನಲ್ಲಿ ಮಾಸ್ಟರ್ ಪ್ಲಾನ್

Spread the love

ಬೆಂಗಳೂರು, ಜ.21-ಸಮನ್ವಯ ಸಮಿತಿ ರಚನೆ, ಕಾರ್ಯಾಧ್ಯಕ್ಷರ ನೇಮಕಕ್ಕೆ ವಿರೋಧ, ಶಾಸಕಾಂಗ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಬೇರೆ ಬೇರೆ ಮಾಡುವುದು ಸೇರಿದಂತೆ ಹಲವಾರು ಗೊಂದಲಗಳನ್ನು ಸೃಷ್ಟಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡುವ ಪ್ರಯತ್ನ ಕಾಂಗ್ರೆಸ್‍ನಲ್ಲಿ ವ್ಯಾಪಕವಾಗಿ ನಡೆದಿದೆ.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರೆಯಲು ಆಸಕ್ತಿ ಹೊಂದಿದ್ದಾರೆ. ವಿಪಕ್ಷ ಸ್ಥಾನ ಮತ್ತು ಶಾಸಕಾಂಗ ಪಕ್ಷ ನಾಯಕ ಸ್ಥಾನ ಎರಡೂ ಒಬ್ಬ ವ್ಯಕ್ತಿ ಬಳಿಯೇ ಇರಬೇಕು. ಯಾವುದೇ ಕಾರಣಕ್ಕೂ ಬೇರ್ಪಡಿಸಬಾರದು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಪಾಟೀಲ್ ಅವರನ್ನು ನೇಮಿಸಬೇಕು. ಜೊತೆಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕು ಎಂಬುದು ಸಿದ್ದರಾಮಯ್ಯ ಅವರ ವಾದವಾಗಿದೆ. ಇತ್ತೀಚಿಗೆ ಸೋನಿಯಾಗಾಂಧಿಯವರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು, ತಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್‍ಗೆ ತಲುಪಿಸಿ ಬಂದಿದ್ದಾರೆ.

ಸಿದ್ದರಾಮಯ್ಯ ಅವರ ನಿಲುವಿಗೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪರಮೇಶ್ವರ್ ಅವರು ಶಾಸಕಾಂಗ ಪಕ್ಷದ ಸ್ಥಾನ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನ ಎರಡನ್ನೂ ಬೇರೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದೇ ಆದರೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕಾತಿಯನ್ನು ಕೈಬಿಡಬೇಕು ಎಂದು ಷರತ್ತು ವಿಧಿಸಿದ್ದಾರೆ.

ಇವೆಲ್ಲದರ ನಡುವೆ ಹಿರಿಯ ನಾಯಕರೊಬ್ಬರ ನೇತೃತ್ವದಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ರಚಿಸುವ ಪ್ರಸ್ತಾವವೂ ಚಾಲನೆಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಎಐಸಿಸಿ ಉಸ್ತುವಾರಿ ನಾಯಕರನ್ನೊಳಗೊಂಡಂತೆ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು. ಅದಕ್ಕೆ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಅಥವಾ ಮಧುಸೂದನ್ ಮಿಸ್ತ್ರೀ ಅವರನ್ನು ನೇಮಿಸಬೇಕೆಂಬ ಚರ್ಚೆಗಳು ಆರಂಭಗೊಂಡಿವೆ.

ಸಮನ್ವಯ ಸಮಿತಿ ರಚನೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಅಧಿಕಾರದಲ್ಲಿರುವ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮನ್ವಯ ಸಮಿತಿ ರಚಿಸಿ, ಕೆಪಿಸಿಸಿ ತಲೆಯ ಮೇಲೆ ಕೂರಿಸಿದರೆ ಗುಂಪುಗಾರಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿಯೊಂದು ವಿಷಯದಲ್ಲೂ ಸಮನ್ವಯ ಸಮಿತಿ ಹಸ್ತಕ್ಷೇಪ ಮಾಡಿದರೆ ಸಂಘಟನೆ ಸೊರಗಿಹೋಗಲಿದೆ ಎಂಬ ವಾದಗಳು ನಡೆಯುತ್ತಿವೆ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಮತ್ತು ಕೆಪಿಸಿಸಿಯ ಅಧ್ಯಕ್ಷ ಸ್ಥಾನದ ಸಂಭವನೀಯ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಇಬ್ಬರೂ ಕೂಡ ಪ್ರಬಲ ಮತ್ತು ಪ್ರಭಾವಿ ನಾಯಕರು. ಇವರಿಬ್ಬರನ್ನು ನಿಯಂತ್ರಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೈಕಮಾಂಡ್‍ಗೂ ಸೆಡ್ಡುಹೊಡೆಯುವ ಆತಂಕ ಇದೆ. ಈ ಹಿಂದೆ ದೇವರಾಜ ಅರಸು, ನಿಜಲಿಂಗಪ್ಪ ಅವರಂತಹ ನಾಯಕರನ್ನು ಸ್ವತಂತ್ರವಾಗಿ ಬೆಳೆಯಲು ಬಿಟ್ಟು ಪಕ್ಷ ಸಾಕಷ್ಟು ಸಮಸ್ಯೆ ಎದುರಿಸಿದೆ.

ಹಾಗಾಗಿ ಮತ್ತೆ ಅದೇ ತಪ್ಪು ಪುನರಾವರ್ತನೆಯಾಗಬಾರದು. ಎಲ್ಲಾ ರಾಜ್ಯಗಳಲ್ಲೂ ಡೇರ್ ಡೆವಿಲ್ ಗುಣಲಕ್ಷಣಗಳನ್ನು ಹೊಂದಿರುವ ಪ್ರಭಾವಿ ನಾಯಕರನ್ನು ನಿಯಂತ್ರಿಸಲು ಸಮನ್ವಯ ಸಮಿತಿ ಅನಿವಾರ್ಯ ಎಂಬ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಸಮನ್ವಯ ಸಮಿತಿ ರಚನೆಯಾಗಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಇದನ್ನು ಕೆಲವು ನಾಯಕರು ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ನಿಯಂತ್ರಿಸುವ ಸಲುವಾಗಿಯೇ ಸಮನ್ವಯ ಸಮಿತಿ ರಚಿಸಲಾಗುತ್ತಿದೆ.

ಇದನ್ನು ಕೈಬಿಡದೆ ಹೋದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರೀ ನಷ್ಟವಾಗಲಿದೆ ಎಂಬ ಎಚ್ಚರಿಕೆ ಮಾತುಗಳು ಕೇಳಿ ಬಂದಿವೆ.  ಈವರೆಗೂ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಎದುರಾಡುವ ನಾಯಕರೇ ಇರಲಿಲ್ಲ. ಆದರೆ ಇತ್ತೀಚೆಗೆ ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರು ಹಲವಾರು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವ್ಯಂಗ್ಯದ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ಕಳೆದ ಎಂಟು ವರ್ಷಗಳಿಂದಲೂ ಕಾಂಗ್ರೆಸ್‍ನಲ್ಲಿ ಪ್ರಶ್ನಾತೀತ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಮೂಲೆಗುಂಪು ಮಾಡಬೇಕೆಂಬ ಪ್ರಯತ್ನಗಳು ಕಾಂಗ್ರೆಸ್‍ನಲ್ಲಿ ವ್ಯಾಪಕವಾಗಿ ನಡೆಯುತ್ತಿವೆ.


Spread the love

About Laxminews 24x7

Check Also

ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Spread the love ಹೊಸದಿಲ್ಲಿ: 5 ಲಕ್ಷ ರೂ. ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ದಿಲ್ಲಿ ನಗರ ವಸತಿ ಸುಧಾರಣ ಮಂಡಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ