ಬೆಂಗಳೂರು,ಏ.18- ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಿ ಮಾಡುವುದನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಗೊಂಡು ಅದೇ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಬೋಧನಾ ಶುಲ್ಕ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಖಾಸಗಿ ಶಾಲೆಗಳವರು ಆನ್‍ಲೈನ್ ಮೂಲಕ ಬೋಧನೆ, ಪಾಠ ಪ್ರವಚನ ನಡೆಸುತ್ತಿದ್ದು, ಈ ಸಂಬಂಧ ಅಗತ್ಯ ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೂರವಾಣಿ, ಇಮೇಲ್, ಎಸ್‍ಎಂಎಸ್ ಮೂಲಕ ಸಂದೇಶ ರವಾನಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅಧ್ಯಕ್ಷತೆಯಲ್ಲಿ ನಿನ್ನೆ ಸಭೆ ನಡೆಸಿ ಆನ್‍ಲೈನ್ ಮೂಲಕ ಭೋಧನೆ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಪೋಷಕರಿಂದ ಶುಲ್ಕ ಪಡೆಯುವಂತಿಲ್ಲ ಎಂದು ನಿರ್ಧರಿಸಲಾಗಿದೆ.
ಆನ್‍ಲೈನ್ ಬೋಧನೆ ಶುಲ್ಕ ಸೇರಿದಂತೆ, ದಾಖಲಾತಿ, ಶಾಲಾ ಶುಲ್ಕ ಬೇರೆ ಯಾವುದೇ ಶುಲ್ಕಗಳನ್ನು ಸರ್ಕಾರದ ಮುಂದಿನ ಆದೇಶದವವರೆಗೆ ಪಡೆಯುವಂತಿಲ್ಲ. ಹಾಗೂ ಈ ಬಗ್ಗೆ ಪೋಷಕರ ಮೇಲೆ ಒತ್ತಡ ಹೇರುವಂತಿಲ್ಲ ಎಲ್ಲ ಖಾಸಗಿ ಶಾಲಾ ಆಡಳಿತಮಂಡಗಳಿಗೆ ಸೂಚನೆ ನೀಡಲಾಗಿದೆ. ಈ ಸೂಚನೆ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.