ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ರಿಮೇಕ್ ಸಿನಿಮಾಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಕೆಲ ರಿಮೇಕ್ ಸಿನಿಮಾಗಳೂ ಅವರಿಗೆ ಯಶಸ್ಸು ಹಾಗೂ ಹೆಸರನ್ನು ತಂದುಕೊಟ್ಟಿವೆ. ಅದೇ ರೀತಿ ಇದೀಗ ಕನ್ನಡದ ಸಿನಿಮಾವೊಂದರ ಮೇಲೆ ಸಮಂತಾ ಕಣ್ಣು ಹಾಕಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ, ಅವರೇ ನಿರ್ಮಿಸುವುದಕ್ಕೂ ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಇತ್ತೀಚೆಗೆ ಸಮಂತಾ ಕನ್ನಡದ ಈ ಸಿನಿಮಾ ನೋಡಿದ್ದು, ತುಂಬಾ ಇಷ್ಟವಾಗಿದೆಯಂತೆ. ಹೀಗಾಗಿ ಈ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದಾರಂತೆ. ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡಿದ್ದ ‘ದಿಯಾ’. ಆರಂಭದಲ್ಲಿ ಹೆಚ್ಚು ಜನರನ್ನು ತಲುಪದಿದ್ದರೂ ಆನ್‍ಲೈನ್ ಪ್ಲಾಟ್‍ಫಾರ್ಮ್‍ನಲ್ಲಿ ಈ ಸಿನಿಮಾ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಮಂತಾ ಅಕ್ಕಿನೇನಿಯವರು ಸಹ ಈ ಸಿನಿಮಾ ನೋಡಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ. ಅಲ್ಲದೆ ರಿಮೇಕ್ ಮಾಡಲು ಸಹ ನಿರ್ಧರಿಸಿದ್ದಾರಂತೆ.
ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದು ಮಾತ್ರವಲ್ಲ, ಸ್ವತಃ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರಂತೆ. ಅಷ್ಟರಮಟ್ಟಿಗೆ ಸಮಂತಾ ಅಕ್ಕಿನೇನಿಯವರ ಮೇಲೆ ದಿಯಾ ಸಿನಿಮಾ ಪರಿಣಾಮ ಬೀರಿದೆಯಂತೆ.
ಈ ಹಿಂದೆ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಯೂ ಟರ್ನ್ ಸಿನಿಮಾವನ್ನು ನಿರ್ದೇಶಕ ಪವನ್ ಕುಮಾರ್ ತೆಲುಗು ಹಾಗೂ ತಮಿಳಿಗೆ ರಿಮೇಕ್ ಮಾಡಿದ್ದರು. ಈ ಚಿತ್ರದಲ್ಲಿ ಸಹ ಸಮಂತಾ ನಟಿಸಿದ್ದರು. ಅಲ್ಲದೆ ಇತ್ತೀಚೆಗೆ ತೆರೆ ಕಂಡ ಜಾನು ಸಹ ತಮಿಳಿನ 99 ಸಿನಿಮಾದ ರಿಮೇಕ್. ಆದರೆ ಈ ಸಿನಿಮಾ ಯಶಸ್ವಿಯಾಗಲಿಲ್ಲ.
ಸ್ಯಾಂಡಲ್‍ವುಡ್‍ನ ದಿಯಾ ಸಿನಿಮಾವನ್ನು ಅಶೋಕ ನಿರ್ದೇಶಿಸಿದ್ದರು. ಇದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ಥ್ರಿಲ್ಲರ್ ಪ್ರೇಮ ಕಥಾ ಹಂದರ ಹೊಂದಿತ್ತು. ನಟಿ ಖುಷಿ ರವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಕ್ಷಿತ್ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಕೃಷ್ಣ ಚೈತನ್ಯ ಚಿತ್ರವನ್ನು ನಿರ್ಮಿಸಿದ್ದರು.