ಬೆಳಗಾವಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುವ ಪ್ರಧಾನಿ ಮೋದಿ ಅವರೇ ತಮ್ಮ ಮಾತುಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೀಪ ಹಚ್ಚುವುದರಿಂದ ಕೊರೊನಾ ಸೋಂಕು ಹೋಗುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾರೆ. ಜನರನ್ನು ಒಂದೆಡೆ ಸೇರಿಸುವಂತಹ ಟಾಸ್ಕ್ ಗಳನ್ನು ನೀಡುತ್ತಾರೆ. ಮುಂದೆ ಯಾವ ಟಾಸ್ಕ್ ನೀಡುತ್ತಾರೆ ಗೊತ್ತಿಲ್ಲ ಎಂದು ಟೀಕಿಸಿದರು.
ಕೊರೊನಾ ಸೋಂಕು ಭೀತಿಪ್ರತಿಯೊಂದು ರಾಜ್ಯದಲ್ಲಿ ಒಂದೊಂದು ತರಹ ಆಗುತ್ತಿದೆ. ಎಲ್ಲ ರಾಜ್ಯದವರು ಸೇರಿಕೊಂಡು ಒಗ್ಗಟ್ಟಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ದೀಪ ಹಚ್ಚುವುದು, ಚಪ್ಪಾಳೆ ಹೊಡೆಯುವುದರಿಂದ ಕೊರೊನಾ ಹೋಗುವುದಿಲ್ಲ. ವೈಜ್ಞಾನಿಕವಾಗಿ ವಿಚಾರ ಮಾಡುವಂತಾಗಬೇಕು ಎಂದರು.