ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ 1400 ರೂಪಾಯಿ ಪೆನ್ಷನ್ ಹಣ 9 ತಿಂಗಳುಗಳಿಂದ ಬಾರದ ಕಾರಣ ಎರಡು ಕಾಲಿನಲ್ಲಿ ಸ್ವಾಧೀನವಿಲ್ಲದ ಮಹಿಳೆಯೊಬ್ಬಳು ಓರ್ವ ಮಗನೊಂದಿಗೆ ಸರಿಯಾಗಿ ಊಟವಿಲ್ಲದೆ ಸಂಕಟ ಪಡುತ್ತಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದಲ್ಲಿ ನಡೆದಿದೆ.
ವಿಕಲಚೇತನೆ ಭಾಗ್ಯಲಕ್ಷ್ಮಿ ತನ್ನ ಮಗನೊಂದಿಗೆ ಅರಸೀಕೆರೆ ಪಟ್ಟಣದಲ್ಲಿ ವಾಸವಿದ್ದು ಹೂಕಟ್ಟಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಲಾಕ್‍ಡೌನ್ ಆದ ನಂತರ ಹೂ ಕಟ್ಟುವ ಕಾಯಕಕ್ಕೂ ಕುತ್ತು ಬಿದ್ದಿದೆ. ಪರಿಣಾಮ ದಿನದ ದುಡಿಮೆಯಿಲ್ಲದೆ, ಓರ್ವ ಮಗನನ್ನು ಸಾಕಲಾಗದೇ ವಿಕಲಚೇತನೆ ಭಾಗ್ಯಲಕ್ಷ್ಮಿ ಸಂಕಟ ಪಡುತ್ತಿದ್ದಾರೆ.
ಭಾಗ್ಯಲಕ್ಷ್ಮಿಗೆ ಎರಡು ಕಾಲಿನಲ್ಲಿ ಸ್ವಾಧೀನ ಇಲ್ಲ. ಹೀಗಾಗಿ ಸರ್ಕಾರದಿಂದ 1400 ರೂಪಾಯಿ ಪೆನ್ಷನ್ ಬರುತ್ತಿತ್ತು. ಅಕೌಂಟ್ ನಂಬರ್‍ನಲ್ಲಿ ತಾಂತ್ರಿಕ ದೋಷವಿದೆ ಎಂದು ಹೇಳಿ ಕಳೆದ ಒಂಬತ್ತು ತಿಂಗಳಿಂದ ಅಧಿಕಾರಿಗಳು ಭಾಗ್ಯಲಕ್ಷ್ಮಿಗೆ ಬರುತ್ತಿದ್ದ ಪೆನ್ಷನ್ ನಿಲ್ಲಿಸಿದ್ದಾರೆ. ಇದರಿಂದ ಮೊದಲೇ ಬಡತನದಲ್ಲಿ ದಿನ ದೂಡುತ್ತಿದ್ದ ಭಾಗ್ಯಲಕ್ಷ್ಮಿ ಬದುಕು ಕೊರೊನಾ ಲಾಕ್‍ಡೌನ್ ನಂತರ ನಿತ್ಯ ನರಕವಾಗಿದೆ.
ಒಂದು ಹೊತ್ತಿನ ಊಟಕ್ಕೂ, ಅಗತ್ಯ ವಸ್ತುಕೊಳ್ಳಲು ಪರದಾಡುವಂತಾಗಿದೆ. ಭಾಗ್ಯಲಕ್ಷ್ಮಿ ಪೆನ್ಷನ್ ಹಣಕ್ಕಾಗಿ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾಗಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ಮಹಿಳೆಗೆ ರಾಜ್ಯ ಸರ್ಕಾರ ಆದಷ್ಟು ಬೇಗ ನೆರವಿನ ಹಸ್ತ ಚಾಚಿ ಸ್ಪಂದಿಸಬೇಕಿದೆ.