Breaking News
Home / ಜಿಲ್ಲೆ / ಆಹಾರದ ಕಿಟ್ ಹಂಚಿಕೆಯಲ್ಲೂ ತಾರತಮ್ಯ : ಸಿದ್ದರಾಮಯ್ಯ ಆರೋಪ

ಆಹಾರದ ಕಿಟ್ ಹಂಚಿಕೆಯಲ್ಲೂ ತಾರತಮ್ಯ : ಸಿದ್ದರಾಮಯ್ಯ ಆರೋಪ

Spread the love

ಬೆಂಗಳೂರು, ಏ.22- ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ, ಕಾರ್ಮಿಕರಿಗೆ ಹಂಚುವ ಆಹಾರದ ಪೊಟ್ಟಣದಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಶಾಸಕ ರಾಮಲಿಂಗಾ ರೆಡ್ಡಿ ಅವರು ಬಡವರಿಗೆ ಹಂಚಲು ತಯಾರಿಸುತ್ತಿರುವ ಆಹಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಆದಾಗಿನಿಂದ ಪ್ರತಿ ದಿನ 48 ಸಾವಿರ ನಿರ್ಗತಿಕ ಕಾರ್ಮಿಕ ವರ್ಗಕ್ಕೆ ಆಹಾರ ಮತ್ತು ದಿನ ನಿತ್ಯ ಆಹಾರ ಪದಾರ್ಥಗಳನ್ನು ಎಲ್ಲರಿಗೂ ಒದಗಿಸುತ್ತಿದ್ದಾರೆ.

ಇದರಲ್ಲಿ ಐದು ಸಾವಿರ ಆಹಾರ ಪೊಟ್ಟಣವನ್ನು ಸರ್ಕಾರದಿಂದ ಒದಗಿಸುತ್ತಿದೆ. ಸರ್ಕಾರ ಎಲ್ಲ ವಿಧಾನಸಭಾಕ್ಷೇತ್ರಗಳಿಗೆ ಸರಿಯಾಗಿ ಆಹಾರ ಪೊಟ್ಟಣ ನೀಡುತ್ತಿಲ್ಲ, ರಾಮಲಿಂಗಾ ರೆಡ್ಡಿ ಗಲಾಟೆ ಮಾಡಿ ತರಿಸಿ ಜನರಿಗೆ ಹಂಚುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಕಾರ್ಮಿಕ ಇಲಾಖೆಯಿಂದ ಆಹಾರ ಪೊಟ್ಟಣ ವಿತರಣೆ ಮಾಡುವಲ್ಲಿ ತಾರತಮ್ಯವಾಗುತ್ತಿದೆ.

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ನೀಡಲಾಗುತ್ತಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಗಮನಕ್ಕೆ ತರಲಾಗಿತ್ತು, ಅನಂತರ ರಾಮಲಿಂಗಾರೆಡ್ಡಿಕ್ಷೇತ್ರಕ್ಕೆ ಐದು ಸಾವಿರ ಪೊಟ್ಟಣಗಳನ್ನು ಹಂಚಿಕೆ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ ಸ್ವಂತ ಖರ್ಚಿನಲ್ಲಿ 43 ಸಾವಿರ ಮಂದಿಗೆ ಬೆಳಗ್ಗೆ, ಸಂಜೆ ಎರಡು ಹೊತ್ತು ಕಾರ್ಮಿಕರಿಗೆ, ವಲಸಿಗರಿಗೆ ಆಹಾರ ಒದಗಿಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕರು ಮಾನವೀಯತೆಯಿಂದ ಕಾರ್ಮಿಕರಿಗೆ ಆಹಾರ ಒದಗಿಸುತ್ತಿದ್ದಾರೆ. ಇದರಲ್ಲಿ ಸರ್ಕಾರಕ್ಕೆ ಸವಾಲು ಹಾಕುವ ಪ್ರಶ್ನೆಯಿಲ್ಲ. ಬಹಳಷ್ಟು ಮಂದಿಗೆ ಕೂಲಿ ಇಲ್ಲ, ಹಸಿವಿನಿಂದ ಬಳಲುತ್ತಿದ್ದಾರೆ. ಸುಮಾರು 3 ಲಕ್ಷ ಜನ ವಲಸಿಗ ಕಾರ್ಮಿಕರು ಬೆಂಗಳೂರಿನಲ್ಲೆ ಇದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಂದಿ ಸಂಘಟಿತ ಕಾರ್ಮಿಕರು, 1.32 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ.

ಇಷ್ಟು ಮಂದಿಗೆ ಸರ್ಕಾರ ನೀಡುತ್ತಿರುವುದು ಕೇವಲ 1 ಲಕ್ಷ ಆಹಾರ ಪೊಟ್ಟಣ ನೀಡುತ್ತಿದೆ. ಅದರಲ್ಲಿ 60 ಸಾವಿರ ಪೊಟ್ಟಣಗಳನ್ನು ಬಿಬಿಎಂಪಿ ಮೂಲಕ ಹಂಚಿಸುತ್ತಿದ್ದಾರೆ. 20 ಸಾವಿರವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ, ಉಳಿದ 20 ಸಾವಿರ ಪೊಟ್ಟಣಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಹಂಚಿಕೆ ಮಾಡುತ್ತಿದ್ದಾರೆ. ಅದರಲ್ಲೂ ತಾರತಮ್ಯ ನಡೆಯುತ್ತಿದೆ.

ಹಸಿವಿಗೆ ಧರ್ಮ, ಜಾತಿ, ಪಕ್ಷ ಭೇದ ಇಲ್ಲ. ಎಲ್ಲರಿಗೂ ಆಹಾರ ಪೂರೈಕೆ ಮಾಡಬೇಕು. ರೋಗ ಜಾತಿ, ಧರ್ಮ ನೋಡಿಕೊಂಡು ಬರಲ್ಲ, ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಂಡು ರಕ್ಷಣೆ ಮಾಡಬೇಕು ಎಂದು ಹೇಳಿದರು.ಇಂದಿರಾ ಕ್ಯಾಂಟಿನ್ ಮೂಲಕ ಉಚಿತ ಆಹಾರ ಪೂರೈಸಲು ದಿನಕ್ಕೆ 60 ಲಕ್ಷದಂತೆ ತಿಂಗಳಿಗೆ 18 ಕೋಟಿ ರೂ.ಗಳು ಖರ್ಚಾಗುತ್ತಿತ್ತು. ಆದರೆ ಅದಕ್ಕೆ ಸರ್ಕಾರ ದರ ನಿಗದಿ ಮಾಡಿದೆ.

ಲಾಕ್ ಡೌನ್ ನಲ್ಲಿ ಉಚಿತವಾಗಿ ಕೊಡಬೇಕು. ಸರ್ಕಾರ ನೀಡುತ್ತಿರುವ ಒಂದು ಲಕ್ಷ ಆಹಾರದ ಪೊಟ್ಟಣಗಳು ಸಾಲುವುದಿಲ್ಲ ಎಂದು ಹೇಳಿದರು.ಶಾಸಕರನ್ನು ಉದ್ದೇಶ ಪೂರ್ವಕವಾಗಿ ಕ್ವಾರಂಟೈನ್ ಮಾಡಬಾರದು. ಒಂದು ವೇಳೆ ರೋಗದ ಲಕ್ಷಣಗಳಿದ್ದರೆ, ಅಗತ್ಯ ಇದ್ದರೆ ಕ್ವಾರಂಟೈನ್ ಮಾಡಬೇಕು ಎಂದು ಶಾಸಕ ಜಮೀರ್ ಅಹಮದ್ ಖಾನ್ ಅವರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೇಳಿಕೆ ನೀಡಿದ ಸಿದ್ದರಾಮಯ್ಯ, ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಾನು ಜಮೀರ್ ಅವರ ಬಳಿ ಮಾತನಾಡಿದ್ದೇನೆ.

ನನ್ನ ಕ್ಷೇತ್ರಕ್ಕೆ ಬರಬೇಡಿ ಎಂದು ನಾನು ಹೇಳಿಲ್ಲ. ರಾತ್ರಿ ಹೊತ್ತು ಬೇಡ, ಹಗಲು ವೇಳೆ ಬನ್ನಿ ಎಂದಿದ್ದೆ. ಇವರು ಅದನ್ನೆ ಮುಂದಿಟ್ಟುಕೊಂಡು ದೊಡ್ಡ ರಾಜಕೀಯ ಮಾಡುತ್ತಿದ್ದಾರೆ ಎಂದರು. ಕಾನೂನಿಗಿಂತ ಯಾರು ದೊಡ್ಡವರಲ್ಲ, ಕಾನೂನನ್ನು ಯಾರೇ ಕೈಗೆತ್ತಿಕೊಂಡರು ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು.

ಕೊರೊನಾ ರೋಗದ ವಿರುದ್ಧ ಹೋರಾಟ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸರೆ ನಿಜವಾದ ಯೋಧರು, ನಾವು ಬರೀ ಹೇಳಿಕೆ ನೀಡುತ್ತಿದ್ದೇವಷ್ಟೆ. ಮುಂಚೂಣಿ ಹೋರಾಟಗಾರರ ಜೊತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಅಕ್ಕಿಯಲ್ಲೇ ಸ್ಯಾನಿಟೈಸರ್ ತಯಾರಿಕೆ ಮಾಡುತ್ತಿದ್ದರೆ ಒಪ್ಪ ಬಹುದಿತ್ತು. ಸ್ಯಾನಿಟೈಸರ್ ತಯಾರಿಕೆಗೆ ಬೇರೆ ವಸ್ತುಗಳಿವೆ, ಈವರೆಗೂ ಆ ಕಚ್ಚಾವಸ್ತುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಅಕ್ಕಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಒಂದು ವೇಳೆ ಸರ್ಕಾರದ ಗೋದಾಮಿನಲ್ಲಿ ಅಕ್ಕಿ ಹೆಚ್ಚಾಗಿದ್ದರೆ ಅದನ್ನು ಹಸಿದವರಿಗೆ ಬಡವರಿಗೆ ಉಚಿತವಾಗಿ ಹಂಚಿ. ಅದರನ್ನು ಬಿಟ್ಟು ಸ್ಯಾನಿಟೈಷರ್ ತಯಾರಿಕೆಗೆ ಬಳಸಬೇಡಿ ಎಂದು ಹೇಳಿದರು.

ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ದೇಶದ್ರೋಹಿಗಳು ಎಂದು ಹೇಳಿದ್ದರೆ ಅದನ್ನು ಖಂಡಿಸುತ್ತೇನೆ. ಬೇಜಾವಾಬ್ದಾರಿ ಹೇಳಿಕೆಯಾಗಲಿದೆ. ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ. ಜಮೀರ್, ಸಿ.ಎಂ.ಇಬ್ರಾಹಿಂ ಸೇರಿ ಎಲ್ಲರೂ ಸಹಕಾರ ಕೊಡುತ್ತಲೆ ಇದ್ದೇವೆ. ಆದರೂ ಈಶ್ವರಪ್ಪ ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಅದಾನಿ ಮ್ಯಾನೇಜರ್‌ ಮಾತ್ರ, ದುಡ್ಡೆಲ್ಲಾ ಪ್ರಧಾನಿ ನರೇಂದ್ರ ಮೋದಿಯದ್ದು: ಕೇಜ್ರಿವಾಲ್

Spread the love ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ