ಮುಂಬೈ: ಮುಂಬೈನಲ್ಲಿ ವಲಸೆ ಕಾರ್ಮಿಕರ ಪರದಾಟ ಹೇಳತೀರದಾಗಿದ್ದು, ಪೊಲೀಸರ ಲಾಠಿ ಚಾರ್ಜ್ ನಿಂದಾಗಿ ದೊಡ್ಡ ಗದ್ದಲ ಉಂಟಾಗಿದೆ. ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದ್ದು, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಾಗ್ವಾದಕ್ಕೆ ಕಾರಣವಾಗಿದೆ.
ಇಂದು ಲಾಕ್‍ಡೌನ್ ತೆರವಾಗಲಿದೆ ಎಂದು ಭಾವಿಸಿದ್ದ ಸ್ಲಂ ನಿವಾಸಿಗಳು, ತಮ್ಮ ಊರುಗಳಿಗೆ ಹಿಂದಿರುಗಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಅದೇ ರೀತಿ ಮುಂಬೈನ ಬಾಂದ್ರಾ ಪಶ್ಚಿಮ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಇಂದು ಬೆಳಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಕ್‍ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದರು.
ತಮ್ಮ ಊರಿಗೆ ತೆರಳಲು ಸಿದ್ಧವಾಗಿರುವ ಎಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಊಟಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ. ಅಲ್ಲದೆ ಕೊರೊನಾ ಸೋಂಕು ತಗುಲುವ ಭೀತಿ ಸಹ ಎದುರಾಗಿದೆ. ಹೀಗಾಗಿ ಎಲ್ಲರೂ ತಮ್ಮ ಊರುಗಳಿಗೆ ತೆರಳಲು ಪಟ್ಟು ಹಿಡಿದ್ದಾರೆ. ಇಂದು ರೈಲುಗಳು ಆರಂಭವಾಗುತ್ತವೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದು, ಹೀಗಾಗಿ ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾರೆ. ಹೇಗಾದರೂ ನಮಗೆ ರೈಲು ವ್ಯವಸ್ಥೆ ಮಾಡಿ, ನಾವು ನಮ್ಮ ಊರುಗಳಿಗೆ ಹೋಗಬೇಕು ಎಂದು ಸ್ಲಂ ನಿವಾಸಿಗಳು ಗೋಗರೆಯುತ್ತಿದ್ದಾರೆ.
ಸಾವಿರಕ್ಕೂ ಅಧಿಕ ಕಾರ್ಮಿಕರು ರೈಲು ನಿಲ್ದಾಣದ ಬಳಿ ಜಮಾವಣೆಯಾಗಿದ್ದು, ಎಷ್ಟು ಮನವೊಲಿಸಲು ಯತ್ನಿಸಿದರೂ ಕೇಳದಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಚದುರಿಸಲು ಯತ್ನಿಸಿದ್ದಾರೆ. ಈ ವೇಳೆ ದೊಡ್ಡ ಗಲಾಟೆಯೇ ನಡೆದಿದೆ. ಇವೆರೆಲ್ಲರೂ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ. ಯಾರ ಮಾತಿಗೂ ಜಗ್ಗದೆ ನಮ್ಮ ಊರಿಗೆ ಕಳುಹಿಸಿ ಎಂದು ಪಟ್ಟುಹಿಡಿದಿದ್ದಾರೆ.
ಈ ಕುರಿತು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿ, ಕಾರ್ಮಿಕರಿಗೆ ವ್ಯವಸ್ಥೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿದೆ. ಅಪಾರ ಸಂಖ್ಯೆಯಲ್ಲಿ ನೆರೆದ ಕಾರ್ಮಿಕರು ನಮಗೆ ಊಟ ಕೊಡಿ, ಇಲ್ಲವೇ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಕೇಳುತ್ತಿದ್ದಾರೆ. ಸರ್ಕಾರ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಉದ್ಧವ್ ಠಾಕ್ರೆ, ಬಾಂದ್ರಾದಲ್ಲಿ ನಡೆದಿರುವ ಘಟನೆ ದುರದೃಷ್ಟಕರ, ಇಂದಿನಿಂದ ರೈಲುಗಳು ಪ್ರಾರಂಭವಾಗುತ್ತವೆ ಎಂದು ಭಾವಿಸಿ ಅವರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿ ಈ ವರೆಗೆ 2334 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 230 ಜನ ಗುಣಮುಖರಾಗಿದ್ದಾರೆ ಎಂದು ಸಿಎಂ ಉದ್ಧವ್ ಠಾಕ್ರೆ ಮಾಹಿತಿ ನೀಡಿದ್ದಾರೆ.