ಬೆಂಗಳೂರು (ಏಪ್ರಿಲ್ 02); ಮಾರಣಾಂತಿಕ ಕೊರೋನಾ ವೈರಸ್ ಇಡೀ ದೇಶಕ್ಕೆ ಬೆದರಿಕೆ ಒಡ್ಡಿದ್ದು ಇದನ್ನು ತಡೆಯುವ ಹಾಗೂ ಲಾಕ್‌ಡೌನ್ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬೆಳಗ್ಗೆ 11 ಗಂಟೆಗೆ ಸಿಎಂಗಳ ಸಭೆ ಕರೆದಿದ್ದಾರೆ. ಆದರೆ, ಈ ಸಭೆಯಲ್ಲಿ ಯಡಿಯೂರಪ್ಪ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಕೇಳಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ರಾಜ್ಯಕ್ಕೆ ಬರ ಮತ್ತು ನೆರೆ ಒಂದರಹಿಂದೊಂದರಂತೆ ಅಪ್ಪಳಿಸಿತ್ತು. ಆದರೆ, ಆ ಸಂದರ್ಭದಲ್ಲಿ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಯಾವುದೇ ಅನುದಾನಗಳೂ ಸಿಕ್ಕಿರಲಿಲ್ಲ. ಈ ಕುರಿತು ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ನಡೆಸುತ್ತಲೇ ಇವೆ. ಇನ್ನೂ ಜಿಎಸ್‌ಟಿ ತೆರಿಗೆ ಹಣದಲ್ಲೂ ರಾಜ್ಯಕ್ಕೆ ಸಲ್ಲಬೇಕಾದ ರಾಜಸ್ವ ಪಾಲನ್ನು ಕೇಂದ್ರ ಸರ್ಕಾರ ಈ ವರೆಗೆ ನೀಡಿಲ್ಲ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಬಜೆಟ್ ಮಂಡಿಸಿದ ನಂತರ ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಈ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಕೊರೋನಾ ಸಹ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು ವೈದ್ಯಕೀಯ ಪರಿಕರಗಳ ಖರೀದಿಗೆ ಸಾಕಷ್ಟು ಹಣದ ಅಗತ್ಯತೆ ಇದೆ. ಹೀಗಾಗಿ ಪ್ರಧಾನಿ ಮೋದಿ ಜೊತೆಗೆ ಇಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ವಿವಿಧ ರಾಜ್ಯಗಳ 8 ಜನ ಸಿಎಂ ಪಾಲ್ಗೊಳ್ಳಲಿದ್ದು ಯಡಿಯೂರಪ್ಪ ಅವರಿಗೂ ಅವಕಾಶ ಲಭಿಸಿದೆ. ಈ ವೇಳೆ ಬಿಎಸ್‌ವೈ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲನ್ನು ಕೇಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.