ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಲಾಕ್‍ಡೌನ್ ಸಮಯದಲ್ಲಿ ತಾವು ಗಮನಿಸಿದ ಒಳ್ಳೆಯ ವಿಷಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಯಾರೂ ಕೂಡ ಮನೆಯಿಂದ ಹೊರಬರುತ್ತಿಲ್ಲ. ಇನ್ನೂ ಸ್ಟಾರ್ ನಟ-ನಟಿಯರು ಕೂಡ ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಜನರು ಕೂಡ ಮನೆಯಲ್ಲಿದ್ದು ಬೇಸರವಾದಾಗ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಿಗೆ ಬಂದು ಕುಟುಂಬದವರಿಂದ ಕಾಲಕಳೆಯುತ್ತಿದ್ದಾರೆ. ಇದನ್ನು ಗಮನಿಸಿದ ರಾಧಿಕಾ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗೆ “ಈ ಲಾಕ್‍ಡೌನ್ ಸಮಯದಲ್ಲಿ ನಾನು ಗಮನಿಸಿದ ಒಂದು ಒಳ್ಳೆಯ ವಿಷಯವೆಂದರೆ, ಅನೇಕ ಜನರು ತಮ್ಮ ಮನೆಯಿಂದ ಹೊರಬಂದು ತಮ್ಮ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಒಂದು ವೇಳೆ ಈ ಲಾಕ್‍ಡೌನ್ ಇಲ್ಲದಿದ್ದರೆ ಟೆರೇಸ್ ಮತ್ತು ಬಾಲ್ಕನಿಗಳನ್ನು ಜನರು ನಿರ್ಲಕ್ಷಿಸುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ಕಳೆದ ವರ್ಷ ರಾಧಿಕಾ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದಾಗ ಕ್ಲಿಕ್ಕಿಸಿದ್ದಾಗಿದೆ. ಇತ್ತೀಚೆಗಷ್ಟೆ ರಾಧಿಕಾ ಅವರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
ರಾಧಿಕಾ ತಮ್ಮ ಅಪ್ಪ-ಅಪ್ಪ ಐರಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದರು. ಅದಕ್ಕೆ “ನಾನು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದೇನೆ ಎಂಬ ಬಗ್ಗೆ ಹಲವರು ಕುತೂಹಲ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಫೋಟೋದಲ್ಲಿರುವ ಇಬ್ಬರನ್ನು ನೋಡಿ. ಇವರೇ ನನ್ನ ಸೀಕ್ರೆಟ್. ಇವರಿಂದ ನಾನು ವಿಶ್ರಾಂತಿ ಪಡೆಯುತ್ತೇನೆ” ಎಂದಿದ್ದರು.
ಅಲ್ಲದೇ “ಐರಾ ಮತ್ತು ಜೂನಿಯರ್ ಯಶ್ ಇವರಿಲ್ಲದೇ ಇರಲು ಸಾಧ್ಯವಿಲ್ಲ. ಅವರು ನನಗೆ ಮಮ್ಮಿ, ಅಪ್ಪಾ, ಆದರೆ ಐರಾ ಮತ್ತು ಜೂನಿಯರ್ ಯಶ್‍ಗೆ ಮಿಮಿ ಮತ್ತು ಅಜ್ಜು ಆಗಿದ್ದಾರೆ. ಐರಾ ತಮ್ಮ ಅಮ್ಮಮ್ಮಾನನ್ನು ಮಿಮಿ ಎಂದು ಕರೆಯುತ್ತಾಳೆ. ಯಾಕೆಂದರೆ ನಾನು ನನ್ನ ಅಮ್ಮನನ್ನು ಮಮ್ಮಿ ಎಂದು ಕರೆಯುತ್ತೇನೆ. ಅದನ್ನು ಕೇಳಿಸಿಕೊಂಡು ಐರಾ ಮಿಮಿ ಎಂದು ಕರೆಯುತ್ತಾಳೆ” ಎಂದು ಬರೆದುಕೊಂಡಿದ್ದರು.