ಬೆಂಗಳೂರು, ಏ. 25 : ಭಜರಂಗ ದಳದ ಮಾಜಿ ಸಂಚಾಲಕ, ಸಾಮಾಜಿಕ ಕಾರ್ಯಕರ್ತ, ವಾಗ್ಮಿ ಮಹೇಂದ್ರ ಕುಮಾರ್ (47)ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ.
ಭಜರಂಗ ದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, 2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಳಿಕ ಅದೇ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು.
2008 ರ ಅಕ್ಟೋಬರ್ 1 ರಂದು ಭಜರಂಗ ದಳಕ್ಕೆ ರಾಜೀನಾಮೆ ನೀಡಿದ ಮಹೇಂದ್ರ ಕುಮಾರ್, 2011 ಫೆಬ್ರವರಿ 21 ರಂದು ಜೆಡಿಎಸ್ ಸೇರಿದ್ದರು. ಸಂಘ ಪರಿವಾರ ಕಟು ಟೀಕಾಕಾರರಾಗಿ ಸಾಮಾಜಿಕ, ಜಾಗೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಹೇಂದ್ರ ಕುಮಾರ್ ಭಾಗವಹಿಸುತ್ತಿದ್ದರು.
ಬಜರಂಗದಳದ ಮೂಲಕ ತಮ್ಮ ಸಾಮಾಜಿಕ ಜೀವನ ಆರಂಭಿಸಿದ್ದ ಮಹೇಂದ್ರ ಕುಮಾರ್ ಬಳಿಕ ಸಂಘಟನೆಯನ್ನು ಬಿಟ್ಟು ಸರ್ವಧರ್ಮ ಸೌಹಾರ್ದ, ಸಾಮಾರಸ್ಯದ ಕುರಿತು ಕಾಳಜಿಯಿಂದ ದುಡಿಯುತ್ತಿದ್ದರು. ರಾಜ್ಯದಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದರು. ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.
ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಅವರು ಅದರಿಂದ ಹೊರಬಂದ ಬಳಿಕ ಸಾಮಾಜಿಕ, ಜಾಗೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು. ‘ನಮ್ಮ ಧ್ವನಿ’ ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದ ಮಹೇಂದ್ರ ಕುಮಾರ್, ಸಮಾಜದ ಪರ ದನಿಯಾಗಿದ್ದರು. ಕೇಂದ್ರ ಸರ್ಕಾರರ ಸಿಎಎ ಕಾಯ್ದೆ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು.