ಬೆಳಗಾವಿ: ಕೇಂದ್ರ ಸರ್ಕಾರ ಭಾರತ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಬಡವರು ಆಹಾರಕ್ಕಾಗಿ ಪರದಾಡುವಂತಾಗಿದ್ದು, ಸಮಾಜ ಸೇವಕ ಸುರೇಂದ್ರ ಅನಗೋಳ್ಕರ್ ನೇತೃತ್ವದ ತಂಡ ಬಡ ಜನರ ಹಸಿವು ನಿಗಿಸುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಇಲ್ಲಿನ ವಿಜಯನಗರದ ಪೈಪ್ಲೈನ್ ರೋಡ್ ನಿವಾಸಿ, ಸಿಸಿ ಕ್ಯಾಮರಾ ಕೆಲಸ ನಿರ್ವಹಿಸುವ ಸ್ವಯಂ ಉದ್ಯೋಗಿ ಸುರೇಂದ್ರ ಕಳೆದ ಮೂರು ವರ್ಷಗಳಿಂದ ಬಡವರ ಹಸಿ ನಿಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
2018ರಿಂದ ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಆಗಮಿಸಿದ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರಿಗೆ ಸುಮಾರು 300 ಜನರಿಗೆ ಆಹಾರ ನೀಡುತ್ತಿದ್ದಾರೆ. ದಿನನಿತ್ಯ ರೋಗಿಗಳಿಗೆ ಬಾಳೆ ಹಣ್ಣು, ಬಿಸ್ಕೇಟ್, ಸೇಬು ಅಥವಾ ಆಹಾರ ನೀಡುತ್ತಿದ್ದಾರೆ. ಆದರೆ ಈಗ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಹೆಚ್ಚು ಜನರಿಗೆ ಆಹಾರದ ದೊರೆಯದೆ ಇರುವ ಕಾರಣ ಪ್ರತಿದಿನಕ್ಕಿಂತ ಹೆಚ್ಚಿನ ಜನರಿಗೆ ಆಹಾರ ನೀಡುತ್ತಿದ್ದಾರೆ.
ಭಾರತವೇ ಬಂದ್ ಆಗಿರುವ ಕಾರಣದಿಂದ ರಸ್ತೆಯ ಬದಿಯಲ್ಲಿ ಇರುವ ನಿರಾಶ್ರೀತರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನುಅರಿತ ಸುರೇಂದ್ರ ಅವರು ಪ್ರತಿದಿನ ಅವರಿಗೆ ಆಹಾರ ನೀಡುತ್ತಿದ್ದಾರೆ. ಆಹಾರದ ಪಾಕೇಟ್ ಮಾಡುವ ಮೂಲಕ ಪ್ರತಿಯೊಬ್ಬ ರಸ್ತೆ ಬದಿಯ ಬಡವರಿಗೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಜತೆಗೆ ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳಿಗೂ ಪ್ರತಿದಿನದಂತೆ ಆಹಾರ ನೀಡುತ್ತಿದ್ದಾರೆ.
ಪೊಲೀಸರಿಗೆ ಹಣ್ಣು, ನೀರು: ಸಮಾಜದ ಒಳಿತಿಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ್ ಬಂದ ಆಗಿರುವ ಕಾರಣ ಜನರ ಸುರಕ್ಷಿತೆ ದೃಷ್ಟಿಯಿಂದ ಮನೆ, ಕುಟುಂಬವನ್ನು ಬಿಟ್ಟು ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಸಿವನ್ನು ಲೆಕ್ಕಿಸದೆ ಸೇವೆ ಗೈಯುತ್ತಿರುವ ಪೊಲೀಸ್ ಸಿಬ್ಬಂದಿಗೆ ಪ್ರತಿದಿನ ಬಾಳೆ ಹಣ್ಣು, ನೀರಿನ ಬಾಟಲ್ ನೀಡುತ್ತಿದ್ದಾರೆ.