Breaking News

ಇ.ವ್ಹಿ.ಎಮ್. ವ್ಯವಸ್ಥೆಯನ್ನೇ ಸಂಶಯ ದೃಷ್ಠಿಯಿಂದ ನೋಡುವಂತಾಗಿದೆ

Spread the love

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ಪಕ್ಷಕ್ಕೆ ಸೇರಿದ್ದರೆ ಅಂತಹ ಸಂದರ್ಭಗಳಲ್ಲಿ ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಹೆಚ್ಚಿನ ಸಹಕಾರ ಮತ್ತು ವಿಶೇಷ ಅನುಧಾನಗಳು ಸಿಗುತ್ತವೆ ಎಂಬ ಪ್ರತೀತಿ ಕರ್ನಾಟಕದ ಪಾಲಿಗೆ ಸುಳ್ಳಾಗಿದ್ದು, ಕರ್ನಾಟಕ ರಾಜ್ಯದ ಹೆಚ್ಚಿನ ಭಾಗ ಪ್ರವಾಹಕ್ಕೆ ಸಿಲುಕಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿ ಕೇಂದ್ರ ಸರಕಾರದಿಂದ ಮುಖ್ಯಮಂತ್ರಿಗಳು 38 ಸಾವಿರ ಕೋಟಿ ರೂಪಾಯಿಗಳ ಅನುಧಾನ ರೂಪದ ಸಹಾಯಧನ ಕೋರಿದ್ದರೂ ಸಹ ಇಲ್ಲಿಯ ವರೆಗೆ ಕೇಂದ್ರ ಸರಕಾರ ಕೇವಲ ಅಂದಾಜು 1869.20 ಕೋಟಿ ರೂಪಾಯಿಗಳಷ್ಟು ಮಾತ್ರ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಇಂದು ಕನ್ನಡ ಸಾಹಿತ್ಯ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು ಸುಮಾರು ವರ್ಷಗಳ ಮಹಾದಾಯಿ ಮತ್ತು ಕಳಸಾ-ಬಂಡೂರ ನಾಲಾ ಹೋರಾಟದ ಫಲಶುೃತಿಯೂ ಇದೇ ಆಗಿದ್ದು, ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಬೇಡಿಕೆಯ ಹಿತಾಸಕ್ತಿಗೆ ಪೂರಕವಾದ ಸ್ಪಂಧನೆ ಎಂದೂ ನೀಡಿಲ್ಲ. ಪ್ರಸಕ್ತ ಕೇಂದ್ರ ಸರಕಾರದ ನಿಲುವು ಇದಕ್ಕೆ ಹೊರತಾಗಿಲ್ಲ. ರಾಜ್ಯದ ಜನತೆ ಬಿ.ಜೆ.ಪಿ. ಪಕ್ಷದ 26 ಜನ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದು, ಕರ್ನಾಟಕದಲ್ಲಿ ಬಿ.ಜೆ.ಪಿ. ಪಕ್ಷದ ಸರಕಾರವಿದ್ದರೂ ಸಹ ಇದೇ ಸ್ಥಿತಿ ಮುಂದುವರೆದಿರುವದು ಖೇಧಕರ ಸಂಗತಿಯಾಗಿದೆ ಎಂದು ತಿಳಿಸಿದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ಅನೇಕ ರಾಜ್ಯಗಳು ಕರ್ನಾಟಕ ರಾಜ್ಯದಂತೆಯೇ ಎದುರಿಸಿರುವ ಅನೇಕ ವಿಶಿಷ್ಟ ಸಂದರ್ಭಗಳಲ್ಲಿ ನಿರೀಕ್ಷಿತ ಹೆಚ್ಚಿನ ಪ್ರಮಾಣದ ಅನುಧಾನದ ಸಹಾಯಧನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿವೆ. ಕೇಂದ್ರ ಸರಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಾದೇಶಿಕ ಪಕ್ಷಗಳ ಸರಕಾರಗಳನ್ನು ಒಲೈಸುತ್ತಿರುವದು ಸಾಮಾನ್ಯವಾಗಿದ್ದು, ಇದೇ ಕಾರಣದಿಂದ ಕರ್ನಾಟಕದಲ್ಲಿಯೂ ಸಹ ಸದೃಢ ಪ್ರಾದೇಶಿಕ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವದು ಅನಿವಾರ್ಯ ಎಂಬ ಮನಸ್ಥಿತಿಗೆ ರಾಜ್ಯದ ಜನತೆ ಬರುತ್ತಿದೆ. ಇದೇ ಕಾರಣದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಸಂಘಟಿತ ಜನತಾ ದಳ(ಜಾ) ಪಕ್ಷವನ್ನು ಬೇರುಮಟ್ಟದಿಂದ ಸಭಲೀಕರಣಗೊಳಿಸುವದು ಅವಶ್ಯಕವಿದ್ದು, ಬೆಳಗಾವಿ ಜಿಲ್ಲೆ ಮತ್ತು ಉತ್ತರ ಕರ್ನಾಟಕದಲ್ಲಿ ಇದಕ್ಕೆ ಪೂರಕವಾದ ಕಾರ್ಯಕ್ಕೆ ತಾವು ಇಂದಿನಿಂದಲೇ ಕಾರ್ಯಪ್ರವೃತ್ತರಾಗುವುದಾಗಿ ಸ್ಪಷ್ಠಪಡಿಸಿದರು.

ಇತ್ತಿಚೇಗೆ ಜರುಗಿದ ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ತಾವು ಹಿನ್ನಡೆಯನ್ನು ಅನುಭವಿಸಿದ್ದು, ಮತದಾರರ ತೀರ್ಪನ್ನು ಗೌರವಿಸಿದ್ದೇನೆ. ಆದರೆ ಗೋಕಾಕದ ಒಂದು ಕುಟುಂಬ ತಮ್ಮ ಕುಟುಂಬದ ಹಿಡಿತದಿಂದ ರಾಜಕೀಯ ವ್ಯವಸ್ಥೆ ಬೇರೆಕಡೆಗೆ ಹೋಗಬಾರದೆಂಬ ವ್ಯವಸ್ಥಿತಿ ರಾಜಕೀಯ ತಂತ್ರಗಾರಿಕೆಯಿಂದ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಎರಡು ಪಕ್ಷಗಳು ತಮ್ಮ ಪರವಾಗಿ ಇರುವಂತೆ ಮಾಡುವ ಮೂಲಕ ಅದೇ ಕುಟುಂಬದ ಸಹೋದರರು ಎರಡು ಪಕ್ಷಗಳ ಅಭ್ಯರ್ಥಿಗಳಾಗಿ ಹಣದ ಹೊಳೆ ಹರಿಸಿದ್ದು ಮತ್ತು ಚುನಾವಣೆಯಲ್ಲಿ ಅನೇಕ ವಾಮಮಾರ್ಗಗಳನ್ನು ಅನುಸರಿಸಿದ್ದು ಕಾರಣವಾಗಿದೆ. ಅಲ್ಲದೇ ಅನೇಕ ಗ್ರಾಮಗಳಲ್ಲಿ ತಮ್ಮ ಪರವಾಗಿ ಹೆಚ್ಚಿನ ಮತದಾರರು ಮತ ಚಲಾಯಿಸಿದ್ದರೂ ಸಹ ಅಲ್ಲಿ ನನ್ನ ಪರವಾಗಿ ಮತಗಳೆ ಇಲ್ಲದಂತಾಗಿರುವದು ಇ.ವ್ಹಿ.ಎಮ್. ವ್ಯವಸ್ಥೆಯನ್ನೇ ಸಂಶಯ ದೃಷ್ಠಿಯಿಂದ ನೋಡುವಂತಾಗಿದೆ ಎಂದು ಹೇಳಿದರು. ತಮ್ಮ ಸೋಲು ಮೌಲ್ಯಯುತ ರಾಜಕಾರಣ ಮತ್ತು ಚುನಾವಣಾ ಪ್ರಕ್ರಿಯೆಯಿಂದ ಸೋಲಾಗಿದ್ದರೆ ನಾನು ಎಂದೋ ಚುನಾವಣಾ ಕಣದಿಂದಲೇ ದೂರ ಸರಿಯುತ್ತಿದ್ದೆ ಎಂದು ತಿಳಿಸಿದ ಅವರು ಗೋಕಾಕದಲ್ಲಿರುವ ಸರ್ವಾಧಿಕಾರಿ ಮನೋಭಾವನೆಯ ಭ್ರಷ್ಟ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಹೋರಾಟ ನಿರಂತರ ಎಂದು ಮತ್ತೊಮ್ಮೆ ಸ್ಪಷ್ಠಪಡಿಸಿದರು.

ತಮ್ಮ ರಾಜಕಾರಣ ಅಧಿಕಾರ ಮತ್ತು ಹಣಕ್ಕಾಗಿ ಪೂರಕವಾಗಿ ಇರದೇ ಮೌಲ್ಯಗಳಿಗೆ ಬದ್ಧವಾದ ರಾಜಕಾರಣ ತಮ್ಮದಾಗಿದೆ ಎಂಬ ಮಾತನ್ನು ದೃಢವಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಸುಭಾನಿ ಹವಾಲ್ದಾರ ವಕೀಲರು, ಸುರೇಶ ಮರಲಿಂಗನ್ನವರ, ಕಾಡಪ್ಪಾ ಪಾಟೀಲ, ಬಿ.ಸಿ. ರಾಮಾಪೂರ, ಲಕ್ಷ್ಮಣ ಕರಮುಶಿ, ದೀಪಕ ರಾಯನ್ನವರ, ಸಿದ್ದು ಶಿರಸಂಗಿ, ಮುತ್ತೆಪ್ಪ ಕಾಗಲೆ ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮರಾಠ ರೆಜಿಮೆಂಟ್‌ನಲ್ಲಿ ನೇಮಕಾತಿ ರಾಲಿ; ಯುವಕರಿಂದ ನೂಕುನುಗ್ಗಲು, ತಳ್ಳಾಟ

Spread the love ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿ ಮರಾಠ ರೆಜಿಮೆಂಟ್ ನಲ್ಲಿ ಸೇನಾ ನೇಮಕಾತಿ ಮುಕ್ತ ರಾಲಿ ನಡೆಯುತ್ತಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ