ಚಿಕ್ಕೋಡಿ(ಬೆಳಗಾವಿ): ಶುಕ್ರವಾರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಆರ್ ಎಸ್ ಎಸ್ ಪ್ರಮುಖರ ಮನೆ ಕದ ತಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಆರ್‍ಎಸ್‍ಎಸ್ ಪ್ರಮುಖ ಅರವಿಂದರಾವ್ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರವಿಂದರಾವ್ ಜೊತೆ ಮಾತುಕತೆ ಮಾತನಾಡುವುದರ ಜೊತೆಗೆ ಬಿಜೆಪಿ ಪಕ್ಷ ಅಧಿಕಾರ ಬರಲು ನನ್ನ ಪಾತ್ರ ತುಂಬಾ ಇದೆ. ಹೀಗಾಗಿ ಕೆಲ ಬಿಜೆಪಿ ನಾಯಕರು ಅವರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಶತಾಯ ಗತಾಯ ಸಚಿವ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ನಿತ್ಯ ಕಾರ್ಯ ತಂತ್ರ ರೂಪಿಸುತ್ತಿರುವ ರಮೇಶ್ ಜಾರಕಿಹೊಳಿ ಇಂದು ಆರ್‍ಎಸ್‍ಎಸ್ ಪ್ರಮುಖರ ಮನೆಗೆ ತೆರಳಿ ಭೇಟಿ ನೀಡಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಅರವಿಂದ ದೇಶಪಾಂಡೆ ಅವರ ಮನೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದ ಶಾಸಕ ರಮೇಶ್ ಜಾರಕಿಹೊಳಿ ಹೊರ ಬಂದ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೇ ನೀಡದೆ ನೋ ರಿಯಾಕ್ಷನ್ ಎಂದು ಹೇಳಿ ತೆರಳಿದ್ದಾರೆ.
ನಿನ್ನೆ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ಇಂತಹ ನಾನು ಸಚಿವನಾಗುವುದಕ್ಕೆ ಲಾಭಿ ಮಾಡುತ್ತೇನಾ?, ನನಗೆ ಇನ್ನೂ ಆ ಸ್ಥಿತಿ ಬಂದಿಲ್ಲ. ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದಿದ್ದು ಅವರ ಮಾತೃ ಶ್ರೀ ನಿಧನಕ್ಕೆ ಸಂತಾಪ ಸೂಚಿಸಲು ಎಂದಿದ್ದರು.
ಇಲ್ಲಿ ಯಾವ ರಾಜಕಾರಣವನ್ನು ಚರ್ಚೆ ಮಾಡಿಲ್ಲ. ಇನ್ನೊಬ್ಬರನ್ನ ಸಚಿವನನ್ನಾಗಿ ಮಾಡುವ ಶಕ್ತಿ ಇರುವ ನಾನು, ಸಚಿವನಾಗೋಕೆ ಲಾಬಿ ಮಾಡುತ್ತೇನಾ?. ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.